Site icon Vistara News

ಕ್ರಿಕೆಟ್‌ ಕೌಶಲ ಕಲಿಯಲು ಲಂಡನ್‌ಗೆ ಹೋಗಲಿದ್ದಾರೆ ಅನುಷ್ಕಾ ಶರ್ಮ!

CWG-2022

ನವ ದೆಹಲಿ : ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ವಿರಾಟ್‌ ಕೊಹ್ಲಿ ಈಗ ಪ್ರದರ್ಶನ ವೈಫಲ್ಯ ಎದುರಿಸುತ್ತಿದ್ದು, ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅವರು ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿ, ದೇಶೀಯ ಕ್ರಿಕೆಟ್‌ನಲ್ಲಿ ಆಡಲಿ ಎಂದೆಲ್ಲ ಹಿರಿಯರು ಸಲಹೆ ಕೊಡುತ್ತಿದ್ದಾರೆ. ಅವರು ಕ್ರಿಕೆಟ್‌ ಕೌಶಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಸಲಹೆಗಳು ವ್ಯಕ್ತಗೊಳ್ಳುತ್ತಿವೆ. ಏತನ್ಮಧ್ಯೆ, ಅವರ ಪತ್ನಿ ಹಾಗೂ ಸ್ಟಾರ್‌ ನಟಿ ಅನುಷ್ಕಾ ಶರ್ಮ ಕ್ರಿಕೆಟ್‌ ತರಬೇತಿಗಾಗಿ ಇಂಗ್ಲೆಂಡ್‌ಗೆ ತೆರಳುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಪತಿ ಕ್ರಿಕೆಟ್‌ನಲ್ಲಿ ವೈಫಲ್ಯ ಕಾಣುತ್ತಿರುವಾಗ ಪತ್ನಿ ಯಾಕೆ ತರಬೇತಿ ಪಡೆಯಬೇಕು ಎಂಬುದು ಎಲ್ಲರ ಪ್ರಶ್ನೆ. ಅದಕ್ಕೆ ಇಲ್ಲಿದೆ ಉತ್ತರ.

ಅನುಷ್ಕಾ ಶರ್ಮ ಅವರು ಭಾರತ ಮಹಿಳೆಯ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಅವರ ಆತ್ಮಕತೆಯನ್ನು ಹೊಂದಿರುವ ಚಲನ ಚಿತ್ರ ‘ಚಕ್ದಾ ಎಕ್ಸ್‌ಪ್ರೆಸ್‌’ನಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬೌಲಿಂಗ್‌ ಸೇರಿದಂತೆ ಕ್ರಿಕೆಟ್‌ನ ನಾನಾ ಕೌಶಲಗಳನ್ನು ಅಭ್ಯಾಸ ಮಾಡಲು ಅವರು ಲಂಡನ್‌ಗೆ ತೆರಳಲಿದ್ದಾರೆ.

ಅರ್ಧ ಚಿತ್ರೀಕರಣ ಮುಕ್ತಾಯ

ಮೂಲಗಳ ಪ್ರಕಾರ ಸಿನಿಮಾದ ಚಿತ್ರೀಕರಣ ಅರ್ಧ ಮುಕ್ತಾಯಗೊಂಡಿದೆ. ಇನ್ನು ಮುಂದೆ ಜೂಲನ್‌ ಅವರ ಕ್ರಿಕೆಟ್‌ ಜೀವನದ ಕುರಿತ ಕತೆಯ ಚಿತ್ರೀಕರಣ ನಡೆಯಬೇಕಾಗಿದೆ. ಅದಕ್ಕಿಂತ ಮೊದಲು ಅಭ್ಯಾಸ ಮಾಡುವುದು ನಟಿಯ ಗುರಿಯಾಗಿದೆ. ಅದಕ್ಕಾಗಿ ಇಂಗ್ಲೆಂಡ್‌ನ ಲೀಡ್ಸ್‌ಗೆ ತೆರಳಲಿದ್ದಾರೆ ಎನ್ನಲಾಗಿದೆ.

ಅನುಷ್ಕಾ ಅವರು ಜೂಲನ್‌ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಅವರ ಚರ್ಯೆಗಳನ್ನು ಸಲೀಸಾಗಿ ಅನುಕರಿಸುತ್ತಿದ್ದಾರೆ. ಅಂತೆಯೇ ಜೂಲನ್ ಮಾದರಿಯಲ್ಲೇ ಕ್ರಿಕೆಟ್‌ನ ಅನ್ನೂ ತೋರಿಸುವುದು ಅವರ ಗುರಿಯಾಗಿದೆ. ಹೀಗಾಗಿ ಇಂಗ್ಲೆಂಡ್‌ಗೆ ಹೋಗಿ ಅಭ್ಯಾಸ ನಡೆಸಲು ಮುಂದಾಗಿದ್ದಾರೆ ಎಂದು ಚಿತ್ರ ತಂಡದ ಮೂಲಗಳು ಹೇಳಿವೆ.
39 ವರ್ಷದ ಜೂಲನ್‌ ಗೋಸ್ವಾಮಿ ಅವರು ಭಾರತ ಮಹಿಳೆಯರ ಕ್ರಿಕೆಟ್‌ ತಂಡದ ಲೆಜೆಂಡ್‌. 281 ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿರುವ ಅವರು 352 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಉತ್ತಮ ಬೌಲರ್‌ ಆಗಿ ಭಾರತ ತಂಡದ ನಾಯಕಿಯಾಗ ಯಶಸ್ಸು ಕಂಡಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಹಲವು ಮಹಿಳಾ ಕ್ರೀಡಾಪಟುಗಳು ಬಯೋಪಿಕ್‌ಗಳು ತೆರೆಗೆ ಬಂದಿದ್ದವು. ಅವುಗಳಲ್ಲಿ ಕೆಲವು ಸೋಲು ಕಂಡಿದ್ದರೆ, ಕೆಲವು ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಅಗಿದ್ದವು. ಇತ್ತೀಚೆಗೆ ಮಿಥಾಲಿ ರಾಜ್‌ ಅವರ ಕಥೆಯನ್ನು ಒಳಗೊಂಡ ಚಲನ ಚಿತ್ರವೂ ಬಿಡುಗಡೆಯಾಗಿತ್ತು. ತಾಪ್ಸಿ ಪನ್ನು ಅವರು ಮಿಥಾಲಿ ಪಾತ್ರ ಮಾಡಿದ್ದರು. ಆ ಚಿತ್ರ ಹೆಚ್ಚು ಹೆಸರು ಮಾಡಿರಲಿಲ್ಲ. ಹೀಗಾಗಿ ಅನುಷ್ಕಾ ಶರ್ಮ ಮೇಲೆ ಒತ್ತಡ ಹೆಚ್ಚಾಗಿದೆ.

ಇದನ್ನೂ ಓದಿ | Team India | ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ವಿರಾಟ್‌ ಕೊಹ್ಲಿಗೆ ಇಲ್ಲೂ ಇಲ್ಲ ಚಾನ್ಸ್‌

Exit mobile version