ಇಂದೋರ್: ಇಲ್ಲಿನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ (ಮಾರ್ಚ್ 3) ಮುಕ್ತಾಯಗೊಂಡು ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ (INDvsAUS) ಮೂರನೇ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ ಹೀನಾಯ ಸೋಲಿಗೆ ಒಳಗಾಗಿದೆ. ಈ ಸೋಲಿಗೆ ಭಾರತ ತಂಡದ ಬ್ಯಾಟರ್ಗಳೇ ಹೊಣೆಗಾರರು. ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸೇರಿದಂತೆ ಎಲ್ಲರೂ ಭಾರತದ ಬ್ಯಾಟರ್ಗಳು ಆಸ್ಟ್ರೇಲಿಯಾ ಸ್ಪಿನ್ ಬೌಲಿಂಗ್ಗೆ ಮಂಕಾಗಿರುವುದನ್ನು ಮನಗಂಡಿದ್ದಾರೆ ಹಾಗೂ ಅದರ ಬಗ್ಗೆ ವಿಶ್ಲೇಷಣೆ ನೀಡುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾದ ಸದಸ್ಯರು ಸೋಲಿನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಗೆದ್ದು 2-1 ಮುನ್ನಡೆ ಪಡೆದಿರುವ ಕಾರಣ ಮುಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ವೇಗದ ಬೌಲರ್ ಉಮೇಶ್ ಯಾದವ್, ಕ್ರಿಕೆಟ್ನಲ್ಲಿ ಇಂಥ ಫಲಿತಾಂಶಗಳು ಮಾಮೂಲಿ ಎಂಬುದಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘
ಪಂದ್ಯ ಮುಕ್ತಾಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ಯಾದವ್, ಕ್ರಿಕೆಟ್ನಲ್ಲಿ ಏನು ಬೇಕಾದರೂ ಘಟಿಸಬಹುದು. ಅಲ್ಲಿ ಫಲಿತಾಂಶ ಅನಿರೀಕ್ಷಿತವಾಗಿರುತ್ತದೆ. ನಾವು ಚೆನ್ನಾಗಿಯೇ ಬೌಲಿಂಗ್ ಮಾಡಿದ್ದೆವು. ಆದರೆ, ಈ ಪಿಚ್ ನಮ್ಮ ಬ್ಯಾಟರ್ಗಳಿಗಾಗಲಿ, ಎದುರಾಳಿ ತಂಡದ ಬ್ಯಾಟರ್ಗಳಿಗಾಗಲಿ ಸುಲಭವಾಗಿರಲಿಲ್ಲ. ಮುಂದೆ ಬಂದು ಬ್ಯಾಟ್ ಬೀಸಿ ರನ್ ಗಳಿಸುವಂತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ.
ವೇಗದ ಬೌಲರ್ ಆಗಿರುವ ನಾನು ಸ್ಟ್ರೈಟ್ ಲೈನ್ನಲ್ಲಿಯೇ ಚೆಂಡೆಸೆಯಲು ಯತ್ನಿಸಿದ್ದೆ. ಸರಿಯಾದ ಏರಿಯಾದಲ್ಲಿ ಚೆಂಡೆಸೆಯುವ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರುತ್ತಿದ್ದೆ. ಪಿಚ್ನಲ್ಲಿ ಲೋ ಬೌನ್ಸ್ ಬೀಳುತ್ತಿದ್ದ ಕಾರಣ ವೇಗಕ್ಕೆ ಮಾತ್ರ ಆಸಕ್ತಿ ವಹಿಸಿದ್ದೆ. ಸ್ವಿಂಗ್ ಮಾಡುವುದಕ್ಕೂ ಪ್ರಯತ್ನ ಮಾಡಿರಲಿಲ್ಲ ಎಂದು ಉಮೇಶ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ : INDvsAUS : ತವರು ನೆಲದಲ್ಲಿ ವಿಶೇಷ ಬೌಲಿಂಗ್ ಸಾಧನೆ ಮಾಡಿದ ಉಮೇಶ್ ಯಾದವ್; ಏನದು ದಾಖಲೆ?
ಬ್ಯಾಟಿಂಗ್ ಮಾಡಲು ಇಳಿಯುವಾಗ ನನಗೆ ತಂಡದಿಂದ ಯಾವುದೇ ಸಂದೇಶ ಇರಲಿಲ್ಲ. ಜೋರಾಗಿ ಬ್ಯಾಟ್ ಬೀಸುವಂತೆ ಹೇಳಿರಲಿಲ್ಲ. ಆದರೆ, ಡಿಫೆನ್ಸ್ ಆಡುವ ಮೂಲಕ ಸುಮ್ಮನೆ ಔಟಾಗುವುದಕ್ಕಿಂತ ಜೋರಾಗಿ ಬ್ಯಾಟ್ ಬೀಸಿ ರನ್ ಗಳಿಸುವುದೇ ನನ್ನ ಗುರಿ ಎಂಬುದಾಗಿ ತಮ್ಮ ಬ್ಯಾಟಿಂಗ್ ವೈಖರಿ ಬಗ್ಗೆ ಉಮೇಶ್ ಯಾದವ್ ಸ್ಪಷ್ಟನೆ ನೀಡಿದರು.