ಚತ್ತೋಗ್ರಾಮ್ : ವಿರಾಟ್ ಕೊಹ್ಲಿ ಎಂದು ಹೇಳಿದ ತಕ್ಷಣ ಆಕ್ರಮಣಕಾರಿ ಆಟಗಾರ, ಎದುರಾಳಿ ತಂಡದ ಅಟಗಾರರನ್ನು ಕುಹಕ ಮಾಡುವ ಕ್ರೀಡಾಪಟು ಎಂಬೆಲ್ಲ ಕಲ್ಪನೆಗಳು ಬಂದು ಬಿಡುತ್ತವೆ. ಅದಕ್ಕೆ ಕಾರಣಗಳೂ ಇವೆ. ಆದರೆ, ಪ್ರದರ್ಶನ ಹಾಗೂ ಅವಕಾಶದ ವಿಚಾರಕ್ಕೆ ಬಂದಾಗ ವಿರಾಟ್ ಕೊಹ್ಲಿ ಧಾರಾಳಿ. ಉತ್ತಮ ಪ್ರದರ್ಶನ ನೀಡಿದವರು ಎದುರಾಳಿ ತಂಡದವರೆಂದೂ ನೋಡದೆ ಅಭಿನಂದನೆ ಸಲ್ಲಿಸುತ್ತಾರೆ. ಅಂತೆಯೇ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (INDvsBAN) ಮೊದಲ ಪಂದ್ಯದ ನಾಲ್ಕನೇ ದಿನವೂ ಆತಿಥೇಯ ತಂಡದ ಬ್ಯಾಟರ್ ಒಬ್ಬರನ್ನು ಪ್ರಶಂಸಿಸಿದ ಪ್ರಸಂಗ ನಡೆಯಿತು.
ಭಾರತ ನೀಡಿದ್ದ 513 ರನ್ಗಳ ಗೆಲುವಿನ ಗುರಿಗೆ ಪ್ರತಿಯಾಗಿ ಆಡಿದ ಬಾಂಗ್ಲಾದೇಶ ತಂಡ ನಾಲ್ಕನೇ ದಿನವಾದ ಶನಿವಾರದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 276 ರನ್ ಬಾರಿಸಿದೆ. ಇನ್ನೂ ಒಂದು ದಿನ ಪಂದ್ಯ ಬಾಕಿ ಉಳಿದಿದ್ದು ಭಾರತಕ್ಕೆ ಗಲುವಿನ ವಿಶ್ವಾಸ ಮೂಡಿದೆ. ಅದಕ್ಕಿಂತ ಮೊದಲು ಬೆಳಗ್ಗಿನ ಅವಧಿಯಲ್ಲಿ ಬಾಂಗ್ಲಾದೇಶದ ಆರಂಭಿಕರಾದ ನಜ್ಮುಲ್ ಹೊಸೈನ್ (67) ಹಾಗೂ ಜಾಕಿರ್ ಹಸನ್ (100) ಭಾರತದ ಬೌಲರ್ಗಳನ್ನು ಕಾಡಿದರು. ಹೀಗಾಗಿ ಭಾರತ ತಂಡಕ್ಕೆ ನಡುಕ ಉಂಟಾಯಿತು. ಬಳಿಕ ಚೇತರಿಸಿಕೊಂಡ ಭಾರತ ತಂಡದ ಅಟಗಾರರು ಪ್ರತ್ಯುತ್ತರ ಕೊಟ್ಟರು.
ಬಾಂಗ್ಲಾದೇಶದ ಬ್ಯಾಟರ್ ಜಾಕಿರ್ ಹಸನ್ಗೆ ಇದು ಪದಾರ್ಪಣೆ ಪಂದ್ಯ. ಅದರಲ್ಲೇ ಅವರು ಶತಕ ಬಾರಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಪರ ಪದಾಪರ್ಣೆ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಮಾಡಿದರು. ಬಾಂಗ್ಲಾ ಆರಂಭಿಕ ಆಟಗಾರ 100 ರನ್ ಬಾರಿಸುತ್ತಿದ್ದಂತೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಬಳಿ ತೆರಳಿ ಎದುರಾಳಿ ತಂಡದ ಆಟಗಾರ ಎಂಬುದನ್ನೂ ನೋಡದೇ ಅಭಿನಂದನೆ ಸಲ್ಲಿಸಿದರು. ಇದೀಗ ಅವರ ಕ್ರೀಡಾಸ್ಫೂರ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ | INDvsBAN | ವಿರಾಟ್ ಕೊಹ್ಲಿಯ ಪ್ರದರ್ಶನ ಪ್ರಶ್ನಾತೀತ; ಅನುಮಾನವೇ ಬೇಡ ಎಂದ ಕೆ. ಎಲ್ ರಾಹುಲ್