ತಿರುವನಂತಪುರ : ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಏಕ ದಿನ ಪಂದ್ಯದ (INDvsSL ODI) ವೇಳೆ ಲಂಕಾ ತಂಡದ ಇಬ್ಬರು ಆಟಗಾರರು ಫೀಲ್ಡಿಂಗ್ ಮಾಡುವ ವೇಳೆ ಪರಸ್ಪರ ಡಿಕ್ಕಿ ಹೊಡೆದು ಗಾಯಗೊಂಡರು. ಅವರಿಬ್ಬರು ಬೌಂಡರಿ ಸ್ಥಳದಲ್ಲಿ ನೋವಿನಿಂದ ಒದ್ದಾಡಿದ ಕಾರಣ ಸ್ವಲ್ಪ ಹೊತ್ತು ಪಂದ್ಯಕ್ಕೆ ಅಡಚಣೆ ಉಂಟಾಯಿತು. ಬಳಿಕ ಅವರಿಬ್ಬರನ್ನೂ ಸ್ಟ್ರೆಚರ್ ಮೂಲಕ ಕೊಂಡೊಯ್ಯಲಾಯಿತು. ಏತನ್ಮಧ್ಯೆ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಬ್ಬರ ಆರೋಗ್ಯ ವಿಚಾರಿಸುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ಭಾರತದ ಇನಿಂಗ್ಸ್ನ 43ನೇ ಓವರ್ನಲ್ಲಿ ಈ ಪ್ರಸಂಗ ನಡೆಯಿತು. ಆ ಓವರ್ನ ಕೊನೇ ಎಸೆತಕ್ಕೆ ವಿರಾಟ್ ಕೊಹ್ಲಿ ಲೆಗ್ ಬೌಂಡರಿ ಕಡೆಗೆ ಚೆಂಡನ್ನು ಬಾರಿಸಿದರು. ಲಂಕಾದ ಆಟಗಾರರಾದ ಜೆಫ್ರಿ ವಂಡರ್ಸೆ ಹಾಗೂ ಅಸ್ಹೆನ್ ಭಂಡಾರ ಚೆಂಡನ್ನು ತಡೆಯಲು ಓಡಿ ಬಂದು ಪರಸ್ಪರ ಡಿಕ್ಕಿ ಹೊಡೆದರು. ಜೋರಾಗಿ ಅಪ್ಪಳಿಸಿದ ಅವರಿಬ್ಬರಿಗೆ ನೋವಿನಿಂದ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ಸಾಕಷ್ಟು ಹೊತ್ತು ಬೌಂಡರಿ ಲೈನ್ನಲ್ಲಿಯೇ ನೋವಿನಿಂದ ನರಳಿದ್ದರು.
ಅವರಿಬ್ಬರು ಎದ್ದೇಳದೇ ಹೋದಾಗ ಶ್ರೀಲಂಕಾ ಪಾಳೆಯದಲ್ಲಿ ಆತಂಕ ಮನೆ ಮಾಡಿತು. ಕೋಚ್ ಮತ್ತು ಸಹಾಯಕ ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿ ನೆರವು ನೀಡಿದರು. ಆಟಗಾರರೆಲ್ಲರೂ ಅಲ್ಲಿ ಸೇರಿಕೊಂಡರು. ಸ್ವಲ್ಪ ಹೊತ್ತಿನ ಬಳಿಕ ಅಂಪೈರ್ ಆಟ ಮುಂದುವರಿಸುವಂತೆ ಸೂಚನೆ ಕೊಟ್ಟರು. ಈ ವೇಳೆ ಲಂಕಾ ನಾಯಕ ದಸುನ್ ಶನಕ ವಾಪಸ್ ಬಂದರು. ಅವರ ಬಳಿ ಹೋದ ವಿರಾಟ್ ಕೊಹ್ಲಿ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ | Virat kohli | ಬೀಚ್ನಲ್ಲಿ ಕುಳಿತಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಯ ಫೋಟೋ ಕ್ಲಿಕ್ಕಿಸಿದ್ದು ಯಾರು?