Site icon Vistara News

ಹಾಲಿ ಚಾಂಪಿಯನ್​ ಬ್ರೆಝಿಲ್​ಗೆ ಸೋಲುಣಿಸಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಅರ್ಜೆಂಟೀನಾ

Argentina football

ಕ್ಯಾರಕಾಸ್: ಫಿಫಾ ವಿಶ್ವಕಪ್ ಫುಟ್ಬಾಲ್(fifa world cup) ಚಾಂಪಿಯನ್​ ಅರ್ಜೆಂಟೀನಾ(Argentina football) ತಂಡ ಇದೇ ವರ್ಷ ಪ್ಯಾರಿಸ್​ನಲ್ಲಿ(Paris Olympics 2024) ನಡೆಯುವ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಬಲಿಷ್ಠ ಬ್ರೆಝಿಲ್ ತಂಡವನ್ನು 1-0 ಅಂತರದಿಂದ ಮಣಿಸಿ ಈ ಸಾಧನೆ ತೋರಿದೆ. ಸೋಲು ಕಂಡ ಬ್ರೆಝಿಲ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ರಿಯೊ ಡಿ ಜನೈರೊ ಹಾಗೂ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಬ್ರೆಝಿಲ್ ಚಿನ್ನದ ಪದಕ ಗೆದ್ದುಕೊಂಡಿತ್ತು.

ದಕ್ಷಿಣ ಅಮೆರಿಕದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಜೇವಿಯರ್ ಮಸ್ಕರಾನೊರಿಂದ ತರಬೇತಿ ಪಡೆದಿರುವ ಅಂಡರ್-23 ಅರ್ಜೆಂಟೀನಾ ತಂಡದ ಪರ ಲುಸಿಯಾನೊ ಗೊಂಡೌ 78ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಅರ್ಜೆಂಟೀನಾ ತನ್ನ ಅಂತಿಮ ಗ್ರೂಪ್ ಅಭಿಯಾನವನ್ನು 3 ಪಂದ್ಯಗಳಲ್ಲಿ ಐದು ಅಂಕವನ್ನು ಗಳಿಸುವ ಮೂಲಕ ಅಂತ್ಯಗೊಳಿಸಿದೆ.

ಅರ್ಜೆಂಟೀನಾ ಫುಟ್ಬಾಲ್​ ತಂಡ 2004ರ ಅಥೆನ್ಸ್ ಒಲಿಂಪಿಕ್ಸ್ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಜಯಿಸಿತ್ತು. 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಲಿಯೋನೆಲ್​ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ಚಿನ್ನ ಜಯಿಸಿತ್ತು. ಹಾಲಿ ಫಿಫಾ ವಿಶ್ವಕಪ್ ಚಾಂಪಿಯನ್​ ಆಗಿರುವ ಅರ್ಜೆಂಟೀನಾ ತಂಡದ ಸಾಮರ್ಥ್ಯವನ್ನು ನೋಡುವಾಗ ಒಲಿಂಪಿಕ್ಸ್​ನಲ್ಲಿಯೂ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.

ಇದನ್ನೂ ಓದಿ Fifa World Cup | ಅರ್ಜೆಂಟೀನಾದ ಕರೆನ್ಸಿಯಲ್ಲಿ ಫುಟ್ಬಾಲ್​ ತಾರೆ ಲಿಯೋನೆಲ್​ ಮೆಸ್ಸಿಯ ಫೋಟೊ!

ಒಲಿಂಪಿಕ್ಸ್​ ಯಾವಾಗ ಆರಂಭ?


2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಮುಂದಿನ ವರ್ಷ ಕೇರಳದಲ್ಲಿ ನಡೆಯಲಿದೆ ಭಾರತ-ಅರ್ಜೆಂಟೀನಾ ಫುಟ್ಬಾಲ್​ ಪಂದ್ಯ


ಕಳೆದ ಒಂದು ವರ್ಷಗಳಿಂದ ಕೇಳಿ ಬರುತ್ತಿದ್ದ ಅರ್ಜೆಂಟೀನಾ ಫುಟ್ಬಾಲ್ ತಂಡದ(argentina vs india football) ಭಾರತ ಪ್ರವಾಸಕ್ಕೆ ಕೊನೆಗೂ ಅಂತಿಮ ಮುದ್ರೆ ಬಿದ್ದಂತಿದೆ. ಕೇರಳದಲ್ಲಿ ಕೆಲವು ಸೌಹಾರ್ದ ಪಂದ್ಯಗಳನ್ನು ಆಡಲು ಅರ್ಜೆಂಟೀನಾ ಫುಟ್ಬಾಲ್​ ಅಸೋಸಿಯೇಶನ್(ಎಎಫ್ಎ) ತನ್ನ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕಳುಹಿಸಿಕೊಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಇದೇ ವಿಚಾರವಾಗಿ ಮಾತನಾಡಿದ್ದ ಸಚಿವ ವಿ.ಅಬ್ದುರಹಿಮಾನ್, ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಭಾರತಕ್ಕೆ ಬರುವುದು ಬಹುತೇಕ ಖಚಿತವಾಗಿ ಈಗಾಗಲೇ ಎಲ್ಲ ಮಾತುಕತೆಗಳು ಮುಕ್ತಾಯಗೊಂಡಿದೆ. ಪಂದ್ಯಕ್ಕೆ ಖರ್ಚಾಗುವ ಎಲ್ಲ ಹಣವನ್ನು ಕೇರಳ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದರು. ಆದರೆ ಪಂದ್ಯ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎನ್ನುವುದನ್ನು ಹೇಳಿರಲಿಲ್ಲ. ಇದೀಗ 2025ರ ಅಕ್ಟೋಬರ್ನಲ್ಲಿ ರಾಜ್ಯದಲ್ಲಿ ಅರ್ಜೆಂಟೀನಾ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯ ಕುರಿತು ಚಿಂತಿಸುತ್ತಿದ್ದೇವೆ ಎಂದಿದ್ದಾರೆ.

Exit mobile version