ಬ್ಯೂನಸ್ ಐರಿಸ್: ಖ್ಯಾತ ಫುಟ್‌ಬಾಲ್ ಆಟಗಾರ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಅವರಿಗೆ ಅರ್ಜೆಂಟೀನಾದ ಫುಟ್ಬಾಲ್ ಸಂಸ್ಥೆ (ಎಎಫ್‌ಎ) ವಿಶೇಷ ಗೌರವ ಸೂಚಿಸಲು ನಿರ್ಧಾರವೊಂದನ್ನು ಕೈಗೊಂಡಿದೆ. ಮೆಸ್ಸಿ ವಿದಾಯದ ಬಳಿಕ ಅವರ ಜೆರ್ಸಿ ನಂ.10 ಕ್ಕೂ ನಿವೃತ್ತಿ ಘೋಷಿಸಲು ಮುಂದಾಗಿದೆ.
“ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ ನಂತರ, ಅವರ ಜೆರ್ಸಿ ಪ್ರಶಸ್ತಿಯನ್ನು ಬೇರೆಯವರಿಗೆ ನೀಡದಿರಲು ನಿರ್ಧರಿಸಲಾಗಿದೆ” ಎಂದು ಎಎಫ್‌ಎ ಅಧ್ಯಕ್ಷ ಕ್ಲಾಡಿಯೊ ತಾಪಿಯಾ ಬಹಿರಂಗಪಡಿಸಿದ್ದಾರೆ.
‘ಮೆಸ್ಸಿಯ ಗೌರವಾರ್ಥವಾಗಿ ನಾವು ಅವರೊಂದಿಗೆ ಅವರ ಜೆರ್ಸಿಗೂ ವಿದಾಯ ಹೇಳುತ್ತೇವೆ. ಹೊಸದಾಗಿ ತಂಡಕ್ಕೆ ಸೇರುವ ಯುವ ಆಟಗಾರರಿಗೆ 10ನೇ ಸಂಖ್ಯೆಯ ಜೆರ್ಸಿಯನ್ನು ನೀಡಲಾಗುವುದಿಲ್ಲ. ಇದು ಲೆಜೆಂಡರಿ ಫುಟ್ಬಾಲ್ ಆಟಗಾರ ಮೆಸ್ಸಿಗಾಗಿ ನಾವು ಮಾಡಬಹುದಾದ ಚಿಕ್ಕ ಕೊಡುಗೆ” ಎಂದು ಕ್ಲಾಡಿಯೊ ಹೇಳಿದ್ದಾರೆ. ಅಚ್ಚರಿ ಎಂದರೆ ಅರ್ಜೆಂಟೀನಾದ ದಿಗ್ಗಜ ಆಟಗಾರ ಡಿಯಾಗೋ ಮರಡೋನಾಗೂ ಸಗದಂತಹ ಮನ್ನಣೆ ಮೆಸ್ಸಿಗೆ ಸಿಗುವ ನಿರೀಕ್ಷೆ ಇದೆ. ಮರಡೋನಾ ಅವರ ಜೆರ್ಸಿಗೂ ವಿದಾಯದ ಗೌರವ ಸೂಚಿಸಲು ಅರ್ಜೆಂಟೀನಾ ಫುಟ್ಬಾಲ್ ಸಂಸ್ಥೆ ನಿರ್ಧರಿಸಿತು. ಆದರೆ ಅರ್ಜೆಂಟೀನಾದ ಪ್ರಸ್ತಾಪವನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ ತಿರಸ್ಕರಿಸಿತು.
ಇದನ್ನೂ ಓದಿ Lionel Messi: ಬಹು ಕೋಟಿ ಮೊತ್ತಕ್ಕೆ ಮಾರಾಟವಾದ ಮೆಸ್ಸಿಯ ವಿಶ್ವಕಪ್ ಜೆರ್ಸಿ
2022ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ತಂಡ ಫೈನಲ್ನಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ಮೂಲಕ ಮಣಿಸಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು. ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಮೆಸ್ಸಿ ಪಡೆ ಸೋತಾಗ ಎಲ್ಲರು ಅರ್ಜೆಂಟೀನಾ ತಂಡವನ್ನು ಗೇಲಿ ಮಾಡಿದ್ದರು. ಆದರೆ ಆ ಬಳಿಕದ ಎಲ್ಲ ಪಂದ್ಯಗಳಲ್ಲಿಯೂ ಗೆದ್ದು ಆರ್ಜೆಂಟೀನಾ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇತ್ತೀಚೆಗಷ್ಟೇ ಮೆಸ್ಸಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಧರಿಸಿದ್ದ ಆರು ಜರ್ಸಿಗಳ(Lionel Messi jersey) ಸೆಟ್ 64.77 ಕೋಟಿ (7.8 ದಶಲಕ್ಷ ಡಾಲರ್) ಮೊತ್ತಕ್ಕೆ ಸೇಲ್ ಆಗಿತ್ತು.
8ನೇ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದ ಮೆಸ್ಸಿ
ಇದೇ ಅಕ್ಟೋಬರ್ನಲ್ಲಿ ಲಿಯೋನೆಲ್ ಮೆಸ್ಸಿ ಅವರು ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ(Ballon d’Or 2023) ಗೆದ್ದಿದ್ದರು. ಇದು ಮೆಸ್ಸಿ ಗೆದ್ದ ದಾಖಲೆಯ 8ನೇ ಪ್ರಶಸ್ತಿಯಾಗಿದೆ. ಮೆಸ್ಸಿ ಅವರು ಈ ಹಿಂದೆ 2009, 2010, 2011, 2012, 2015, 2019 ಮತ್ತು 2021 ರಲ್ಲಿ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ 7 ಸೊಗಸಾದ ಗೋಲುಗಳನ್ನು ಬಾರಿಸಿದ್ದರು. ಇತ್ತೀಚೆಗಷ್ಟೇ ಫ್ರಾನ್ಸ್‌ನ ಪ್ಯಾರಿಸ್ ಸೈಂಟ್ ಜರ್ಮೈನ್ (PSG) ಫುಟ್ಬಾಲ್ ಕ್ಲಬ್ನಿಂದ ಹೊರ ಬಂದಿರುವ ಮೆಸ್ಸಿ, ಅಮೆರಿಕದ ಮಿಯಾಮಿ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.
ಭಾರತದಲ್ಲಿ ಸೌಹಾರ್ದ ಪಂದ್ಯ ಆಡಲಿದ್ದಾರೆ ಮೆಸ್ಸಿ…
ಅರ್ಜೆಂಟೀನಾ ತಂಡವು(Argentina football Team) ಕೇರಳಕ್ಕೆ ಬರಲಿದ್ದು ಭಾರತ ತಂಡದ ಜತೆ ಸೌಹಾರ್ದ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ ಎಂದು ಕೇರಳ(Kerala) ಸರ್ಕಾರ ಇತ್ತೀಚೆಗೆ ಮಾಹಿತಿ ನೀಡಿತ್ತು. ಹೀಗಾಗಿ ಮೆಸ್ಸಿ ಕೂಡ ಭಾರತಕ್ಕೆ ಬರಲಿದ್ದಾರೆ. ಭಾರತದಲ್ಲಿ ಸ್ನೇಹಾರ್ಥ ಪಂದ್ಯವನ್ನಾಡುಲು ಅರ್ಜೆಂಟೀನಾ ತಂಡ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(All India Football Federation)ಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಪಂದ್ಯ ಆಯೋಜನೆಗೆ ಭಾರಿ ಹಣದ ಅವಶ್ಯಕತೆ ಇರುವುದರಿಂದಾಗಿ ಈ ಮನವಿಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತಿರಸ್ಕರಿಸಿತ್ತು. ಇದೇ ವೇಳೆ ಕೇರಳ ಸರ್ಕಾರ ತಮ್ಮ ರಾಜ್ಯದಲ್ಲಿ ಪಂದ್ಯವನ್ನು ಆಡಿಸಲು ಮುಂದೆ ಬಂದಿತ್ತು. ಅಲ್ಲದೆ ಅರ್ಜೆಂಟೀನಾ ತಂಡವು ಭಾರತದಲ್ಲಿ ಪಂದ್ಯ ಆಡುವ ಆತಿಥ್ಯವನ್ನು ವಹಿಸಿಕೊಂಡಿತು. ಈ ವಿಚಾರವನ್ನು ಅಧಿಕೃತವಾಗಿಯೂ ಪಿಣರಾಯಿ ಸರ್ಕಾರ ಪ್ರಕಟಿಸಿತ್ತು.