Site icon Vistara News

Arjun Tendulkar | ಗೋವಾ ಪರ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅರ್ಜುನ್​ ತೆಂಡುಲ್ಕರ್​

Arjun Tendulkar

ಗೋವಾ: ಟೀಮ್​ ಇಂಡಿಯಾದ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರ ಪುತ್ರ ಅರ್ಜುನ್​ ತೆಂಡುಲ್ಕರ್(Arjun Tendulkar)​ ರಣಜಿ ಕ್ರಿಕೆಟ್​ ಟೂರ್ನಿಯಲ್ಲಿ ಗೋವಾ ಪರ ಕಣಕ್ಕಿಳಿಯುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ ಮಂಗಳವಾರ ಚಾಲನೆ ದೊರೆತಿದ್ದು, ಗೋವಾ ತಂಡವು ಎಲೈಟ್ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅದರಂತೆ ಮಂಗಳವಾರ ರಾಜಸ್ಥಾನ ವಿರುದ್ಧ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಗೋವಾ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್​ಗೆ 210 ರನ್​ ಕಲೆಹಾಕಿದೆ.

ಮುಂಬಯಿ ತಂಡದಲ್ಲಿ ಸರಿಯಾದ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಎಡಗೈ ಮಧ್ಯಮ ವೇಗಿ ಅರ್ಜುನ್ ತೆಂಡುಲ್ಕರ್ ಅವಕಾಶ ಅರಸಿ ಗೋವಾದತ್ತ ಮುಖ ಮಾಡಿದ್ದರು. ಇದೀಗ ರಾಜಸ್ಥಾನ ವಿರುದ್ಧ ಮೊದಲ ರಣಜಿ ಪಂದ್ಯವನ್ನಾಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಸದ್ಯ ಅವರು 4 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

“ಅರ್ಜುನ್ ತೆಂಡುಲ್ಕರ್‌ 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ತಂಡದ ಪರ ಆಡಲು ಬಯಸಿದ್ದರು. ಆಗ ನಾವು ಅರ್ಜುನ್ ತೆಂಡುಲ್ಕರ್ ಅವರಿಗೆ ಮೊದಲು ನೀವು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯಿಂದ ನಿರಾಪೇಕ್ಷಣ ಪತ್ರವನ್ನು ತನ್ನಿ ಎಂದು ಸೂಚಿಸಿದೆವು. ಅದು ಇಂದು ನಮಗೆಸಿಕ್ಕಿದೆ. ಅದರಂತೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ” ಎಂದು ಗೋವಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ವಿಪುಲ್ ಫಡ್ಕೆ ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಅರ್ಜುನ್​ ತೆಂಡುಲ್ಕರ್​ ಇದುವರೆಗೂ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನಾಡಲು ಸಾಧ್ಯವಾಗಿಲ್ಲ. ಇದೀಗ ರಣಜಿ ಟೂರ್ನಿಯಲ್ಲಿ ಮಿಂಚಿದರೆ ಅವರಿಗೆ ಮುಂದಿನ ವರ್ಷದ ಐಪಿಎಲ್​ನಲ್ಲಿ​ ಆಡಲು ಅವಕಾಶದ ಬಾಗಿಲು ತೆರೆಯಬಹುದು.

ಇದನ್ನೂ ಓದಿ | IND VS BAN | ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಪಿಚ್​ ರಿಪೋರ್ಟ್​

Exit mobile version