ಮುಂಬಯಿ: ಟೀಮ್ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಚೊಚ್ಚಲ ಇನಿಂಗ್ಸ್‌ನಲ್ಲಿಯೇ ಶತಕ ಬಾರಿಸಿ ಮಿಂಚಿದ್ದಾರೆ.
ಬುಧವಾರ ರಾಜಸ್ಥಾನ ವಿರುದ್ಧ ದ್ವಿತೀಯ ದಿನದಾಟದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅರ್ಜುನ್ 2 ಸಿಕ್ಸರ್ ಮತ್ತು 12 ಬೌಂಡರಿಗಳ ಸಹಿತ ಅಜೇಯ ಶತಕ ಪೂರೈಸಿದ್ದಾರೆ. ಮಂಗಳವಾರ ದಿನದಾಟದ ಅಂತ್ಯಕ್ಕೆ 4 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇದೀಗ ಶತಕ ಸಿಡಿಸುವ ಮೂಲಕ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ 1988ರಲ್ಲಿ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಅರ್ಜುನ್ ಈ ಪಂದ್ಯದಲ್ಲಿ 120 ರನ್ ಗಳಿಸಿ ಕಮಲೇಶ್ ನಾಗರ್ಕೋಟಿಗೆ ವಿಕೆಟ್ ಒಪ್ಪಿಸಿದರು.
ಅಪ್ಪನಂತೆ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ ಅರ್ಜುನ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಆಡಿದರೂ ಅಚ್ಚರಿ ಇಲ್ಲ. ಕಳೆದ ಆವೃತ್ತಿಯವರೆಗೂ ಮುಂಬೈ ತಂಡದಲ್ಲಿದ್ದ ಅರ್ಜುನ್ಗೆ ಆಡುವ ಇಲೆವೆನ್ನಲ್ಲಿ ಈವರೆಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮುಂಬೈ ತಂಡ ತೊರೆದಿದ್ದ ಅರ್ಜುನ್ ಗೋವಾ ಪರ ರಣಜಿ ಆಡಲು ನಿರ್ಧರಿಸಿದ್ದರು. ಇದೀಗ ತಮ್ಮ ನಿರ್ಧಾರಕ್ಕೆ ಸರಿಯಾದ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಅವರ ಈ ಇನ್ನಿಂಗ್ಸ್ ಅವರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿದ್ದು, ಮುಂದಿನ ಪಂದ್ಯಗಳಲ್ಲೂ ಅವರು ಉತ್ತಮ ಪ್ರದರ್ಶನ ತೋರಿದರೆ ಮುಂಬೈ ಇಂಡಿಯನ್ಸ್ ತಂಡದ ಪರ ಅವರು ಐಪಿಎಲ್ಗೆ ಪದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆಯಿದೆ.
ಗುಜರಾತ್ ವಿರುದ್ಧ ಅಜೇಯ 100 ರನ್ ಬಾರಿಸಿದ್ದ ಸಚಿನ್
34 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ರಣಜಿ ಪಂದ್ಯವನ್ನು ಗುಜರಾತ್ ವಿರುದ್ಧ 1988ರ ಡಿಸೆಂಬರ್ 11 ರಂದು ಮುಂಬೈ ಪರ ಆಡಿದ್ದರು. ಆಗ ಕೇವಲ 15 ವರ್ಷ ವಯಸ್ಸಿನ ಸಚಿನ್ 100 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ ಆಡಿದ ಸಚಿನ್ಗೆ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. ಇದೀಗ ಮಗ ಅರ್ಜುನ್ ತೆಂಡೂಲ್ಕರ್ ಕೂಡ ಅಪ್ಪನಂತೆ ಡಿಸೆಂಬರ್ನಲ್ಲಿಯೇ ಶತಕ ಬಾರಿಸಿದ್ದು ವಿಶೇಷ.
ಇದನ್ನೂ ಓದಿ | IND VS BAN | 4 ಸಾವಿರ ರನ್ ಜತೆಗೆ ಸಿಕ್ಸರ್ನಲ್ಲಿಯೂ ನೂತನ ದಾಖಲೆ ಬರೆದ ರಿಷಭ್ ಪಂತ್