Site icon Vistara News

Domestic Cricket | ಗೋವಾ ಫ್ಲೈಟ್‌ ಹತ್ತಲು ಅನುಮತಿಗಾಗಿ ಕಾಯುತ್ತಿದ್ದಾರೆ ಅರ್ಜುನ್‌ ತೆಂಡೂಲ್ಕರ್‌

domestic cricket

ಮುಂಬಯಿ : ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಅವರ ಕ್ರಿಕೆಟ್ ಕೆರಿಯರ್‌ ಬಗ್ಗೆ ಸಾಲು ಸಾಲು ಚರ್ಚೆಗಳು ನಡೆಯುತ್ತಿವೆ. ಸಚಿನ್‌ ಪುತ್ರನಾಗಿದ್ದರೂ ಅವರಿಗೆ ಮುಂಬಯಿ ರಣಜಿ ತಂಡ ಹಾಗೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಪ್ರಶ್ನಿಸಲಾಗುತ್ತಿದೆ. ಆದರೆ, ಹಲವಾರು ಕ್ರಿಕೆಟ್‌ ಪ್ರತಿಭೆಗಳ ನಡುವೆ ಅರ್ಜುನ್‌ ತೆಂಡೂಲ್ಕರ್ ಅವರಿಗೆ ಅವಕಾಶ ಸಿಗುತ್ತಿಲ್ಲ ಎಂಬುದು ವಾಸ್ತವ. ಹೀಗಾಗಿ ಅರ್ಜುನ್‌ ಅವರು ದೇಶೀಯ ಕ್ರಿಕೆಟ್‌ನಲ್ಲಿ (Domestic Cricket) ಮುಂಬಯಿ ಬಿಡಲು ಮುಂದಾಗಿದ್ದು, ಗೋವಾಗೆ ಹಾರಲು ಯತ್ನಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

ಅರ್ಜುನ್‌ ತೆಂಡೂಲ್ಕರ್‌ ಅವರು ಮುಂಬಯಿ ಕ್ರಿಕೆಟ್‌ ಸಂಸ್ಥೆಗೆ ನಿರಾಕ್ಷೇಪಣಾ ಪತ್ರಕ್ಕಾಗಿ (ಎನ್‌ಒಸಿ) ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಂದ ಒಪ್ಪಿಗೆ ಸಿಕ್ಕಿದರೆ ಅವರು ಗೋವಾ ಕ್ರಿಕೆಟ್‌ ಸಂಸ್ಥೆಗೆ ಅರ್ಜಿ ಸಲ್ಲಿಸಲಿದ್ದಾರೆ.

“ಹೆಚ್ಚೆಚ್ಚು ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವುದು ಅರ್ಜುನ್‌ ತೆಂಡೂಲ್ಕರ್‌ ಅವರಿಗೆ ಅನಿವಾರ್ಯವಾಗಿದೆ. ಮೈದಾನದಲ್ಲಿ ಹೆಚ್ಚು ಹೊತ್ತು ಇದ್ದರೆ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಸಾಧ್ಯವಿದೆ. ಹೀಗಾಗಿ ಗೋವಾಗೆ ತೆರಳಲು ಮುಂದಾಗಿದ್ದಾರೆ,” ಎಂದು ಮೂಲಗಳು ತಿಳಿಸಿವೆ.

ಅರ್ಜುನ್‌ ತೆಂಡೂಲ್ಕರ್‌ ೨೦೨೦-೨೧ನೇ ಕ್ರಿಕೆಟ್‌ ಋತುವಿನಲ್ಲಿ ಮುಂಬಯಿ ಪರ ಎರಡು ಸೈಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಆದರೆ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿರಲಿಲ್ಲ. ಅದೇ ರೀತಿ ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ಬಳಗ ಸೇರಿದ್ದರೂ, ಮೈದಾನಕ್ಕೆ ಇಳಿಯುವ ಅವಕಾಶ ಪಡೆದಿರಲಿಲ್ಲ. ಇವೆಲ್ಲ ಕಾರಣಕ್ಕೆ ಮುಂಬಯಿ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಗೋವಾ ಕ್ರಿಕೆಟ್‌ ಸಂಸ್ಥೆಯೂ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್‌ ಒಬ್ಬರ ಅವಶ್ಯಕತೆ ಭಾರತ ತಂಡಕ್ಕಿದೆ. ಈ ಹಿನ್ನೆಲೆಯಲ್ಲಿ ಅರ್ಜುನ್‌ ಅವರ ಸೇರ್ಪಡೆ ಬಗ್ಗೆ ಚರ್ಚಿಸಲಾಗುತ್ತಿದೆ,” ಎಂದು ಹೇಳಿದ್ದಾರೆ.

ಗವಾಸ್ಕರ್‌ ಮಗ ಮುಂಬಯಿ ತೊರೆದಿದ್ದರು

ಈ ಹಿಂದೆ ಮುಂಬಯಿ ಭಾರತ ತಂಡದ ಹಿರಿಯ ಆಟಗಾರ ಸುನೀಲ್‌ ಗವಾಸ್ಕರ್‌ ಅವರ ಪುತ್ರ ರೋಹನ್‌ ಗವಾಸ್ಕರ್‌ ಕೂಡ ಮುಂಬಯಿ ತೊರೆದಿದ್ದರು. ಬಂಗಾಳ ತಂಡ ಸೇರಿಕೊಂಡು ತಂಡದ ಪರ ಋತುವಿನ ಗರಿಷ್ಠ ರನ್‌ ಗಳಿಕೆದಾರ ಎನಿಸಿಕೊಂಡಿದ್ದರು. ಅಲ್ಲದೆ, ತಂಡದ ನಾಯಕರಾಗಿಯೂ ಕೆಲಸ ಮಾಡಿದ್ದರು.

ಗೋವಾದ ವಿಚಾರಕ್ಕೆ ಬಂದರೆ ಸಚಿನ್‌ ಅವರ ಪುತ್ರ ಈ ತಂಡ ಸೇರಲಿರುವ ಸ್ಟಾರ್‌ ಆಟಗಾರನ ಮಗ. ಈ ಹಿಂದೆ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌ ಅವರ ಪುತ್ರ ಮೊಹಮ್ಮದ್ ಅಸಾದುದ್ದೀನ್‌ ಗೋವಾ ಪರ ಆಡಿದ್ದರು.

ಇದನ್ನೂ ಓದಿ | ಭಾರತದಲ್ಲಿ ಅವಕಾಶ ಸಿಗದೆ ಕೌಂಟಿ ಕ್ರಿಕೆಟ್​ ಆಡಲು ತೆರಳಿದ ಕ್ರಿಕೆಟ್​ ದೇವರ (Sachin Tendulkar) ಮಗ!

Exit mobile version