ನವದೆಹಲಿ: ಪುಣೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ(Senior National Championship) ದೇಶದ ವಿವಿಧ ಭಾಗಗಳಿಂದ ಒಟ್ಟು 700 ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ನ ಅಮಾನತುಗೊಂಡಿರುವ(suspended Wrestling Federation of India) ಆಡಳಿತ ಮಂಡಳಿ ಶನಿವಾರ ತಿಳಿಸಿದೆ.
ಒಡಿಶಾ ಮತ್ತು ಪಂಜಾಬ್ ರಾಜ್ಯದ ಕುಸ್ತಿಪಟುಗಳು ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಎಂದು ಭಾರತ ಕುಸ್ತಿ ಫೆಡರೇಷನ್ ತಿಳಿಸಿದೆ. ಈ ಟೂರ್ನಿ ಸೋಮವಾರದಿಂದ ಆರಂಭಗೊಳ್ಳಲಿದೆ. ಜನವರಿ 29 ರಿಂದ 31ರ ವರೆಗೆ ಪುಣೆಯಲ್ಲಿ ಮಹಾರಾಷ್ಟ್ರ ರಾಜ್ಯ ಕುಸ್ತಿಗಿರಿ ಸಂಘದ ನೇತೃತ್ವದಲ್ಲಿ ಈ ಟೂರ್ನಿ ನಡೆಯಲಿದೆ ಎಂದು ಅಮಾನತುಗೊಂಡಿರುವ ಮಂಡಳಿ ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಭಾರತ ಕುಸ್ತಿ ಫೆಡರೇಷನ್‌ನ ನೂತನ ಅಧ್ಯಕ್ಷರಾದ ಸಂಜಯ್ ಸಿಂಗ್(Sanjay Singh) ನೇತೃತ್ವದ ಸಮಿತಿಯು ಅಧಿಕಾರ ಸ್ವೀಕರಿಸಿದ ಮರು ದಿನವೇ ತರಾತುರಿಯಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆಸುವುದಾಗಿ ಘೋಷಿಸಿತ್ತು. ಇದು ನಿಯಮ ಉಲ್ಲಂಘನೆಯಾಗಿದೆ ಎಂದು ನೂತನ ಆಡಳಿತ ಮಂಡಳಿಯನ್ನು ಕ್ರೀಡಾ ಸಚಿವಾಲಯವು ಡಿಸೆಂಬರ್ 24 ರಂದು ಅಮಾನತುಗೊಳಿಸಿತ್ತು. ಜತೆಗೆ ಡಬ್ಲ್ಯುಎಫ್‌ಐ ಆಯೋಜಿಸುವ ಯಾವುದೇ ಕ್ರೀಡಾಕೂಟಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿತ್ತು. ಆದಾಗ್ಯೂ, ಡಬ್ಲ್ಯುಎಫ್‌ಐ ಈ ಟೂರ್ನಿ ಆಯೋಜಿಸುವ ಮೂಲಕ ಕ್ರೀಡಾ ಸಚಿವಾಲಯಕ್ಕೆ ಸಡ್ಡು ಹೊಡೆದಿದೆ. ಅತ್ತ ಭೂಪೇಂದ್ರ ಸಿಂಗ್ ಬಾಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯು ಫೆಬ್ರವರಿ 2 ರಿಂದ 5ರ ವರೆಗೆ ಜೈಪುರದಲ್ಲಿ ಪ್ರತ್ಯೇಕ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್ ನಡೆಸುವುದಾಗಿ ಘೋಷಿಸಿದೆ.
ಇದನ್ನೂ ಓದಿ ಅಮಾನತು ವಾಪಸ್ ಪಡೆಯದಿದ್ದರೆ ಕಾನೂನು ಹೋರಾಟ; ಸಂಜಯ್ ಸಿಂಗ್ ಎಚ್ಚರಿಕೆ
ಡಬ್ಲ್ಯುಎಫ್‌ಐ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್ ಕಳೆದ ವರ್ಷದ ಡಿಸೆಂಬರ್ ಅಂತ್ಯದಲ್ಲಿ ನಡೆಯಬೇಕಿತ್ತು. ಆದರೆ, ಕ್ರೀಡಾ ಸಚಿವಾಲಯ ನೂತನ ಆಡಳಿತ ಮಂಡಳಿಯನ್ನು ಅಮಾನತು ಮಾಡಿದ ಕಾರಣ ಇದು ನಡೆದಿರಲಿಲ್ಲ. ಫ್ರೀಸ್ಟೈಲ್, ಗ್ರೀಕೊ ರೋಮನ್ ಮತ್ತು ಮಹಿಳಾ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
700 ಕುಸ್ತಿಪಟುಗಳು ಭಾಗಿ
‘ಪಂಜಾಬ್ ಮತ್ತು ಒಡಿಶಾ ಹೊರತುಪಡಿಸಿ ಈ ಕ್ರೀಡಾಕೂಟದಲ್ಲಿ ದೇಶದ ಸುಮಾರು 700 ಕುಸ್ತಿಪಟುಗಳು ಭಾಗವಹಿಸುತ್ತಿದ್ದಾರೆ. ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಎಲ್ಲ ನೋಂದಾಯಿತ ರಾಜ್ಯ ಸಂಸ್ಥೆಗಳು ತನ್ನ ತಂಡಗಳನ್ನು ಕಳುಹಿಸುತ್ತಿವೆ’ ಎಂದು ಸಂಜಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟೂರ್ನಿಯಲ್ಲಿ ಸ್ಪರ್ಧಿಸಬೇಡಿ ಎಂದಿದ್ದ ಸಾಕ್ಷಿ ಮಲಿಕ್!
ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರಾದ ಹಿನ್ನೆಲೆ ಇದನ್ನು ಖಂಡಿಸಿ ಕುಸ್ತಿಗೆ ವಿದಾಯ ಹೇಳಿದ್ದ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ನಡೆಸುವ ಈ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಬಾರದು ಎಂದು ಕುಸ್ತಿಪಟುಗಳಲ್ಲಿ ಮನವಿ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ಮನವಿ ಮಾಡಿದ್ದ ಸಾಕ್ಷಿ, ‘ಅಡ್‌ಹಾಕ್ ಸಮಿತಿಯು ನಡೆಸಲಿರುವ ಟೂರ್ನಿ ಅಧಿಕೃತವಾಗಿದೆ. ಅಮಾನತುಗೊಂಡಿರುವ ಸಮಿತಿಯಿಂದ ನಡೆಸುವ ಟೂರ್ನಿಯಲ್ಲಿ ಯಾರು ಕೂಡ ಭಾಗವಹಿಸಬೇಡಿ’ ಎಂದು ಹೇಳಿದ್ದರು.