ಬೆಂಗಳೂರು: ಕೆಲವು ಸಾಧನೆಗಳೇ ಹಾಗೆ. ಪರ್ವತ ಏರಿದ ಮೇಲೆ ಕೆಳಗಿನ ಇಳಿಜಾರು ನೋಡುವಾಗ ಎದೆ ಝಲ್ಲೆನ್ನುತ್ತದೆ… ಈ ಸಾಧನೆ ನಿಜವೇನಾ ಎಂಬ ಬೆರಗು ಮೂಡುತ್ತದೆ. ಶಿಖರ ಸಾಧನೆ ಆತ್ಮತೃಪ್ತಿ ತರುತ್ತದೆ. ಸುಲಭವಾಗಿ ದಕ್ಕಿದ್ದು ಸಾಧನೆ ಎನಿಸಿಕೊಳ್ಳುವುದಿಲ್ಲ. ಇತಿಹಾಸ ನಿರ್ಮಾಣ, ದಿನ ಬೆಳಗಾದರೆ ಸಾಧ್ಯವಾಗುವುದಿಲ್ಲ. ನೆಲದಾಳದ ಲೋಹದ ತುಣುಕು ಅಪರಂಜಿ ಚಿನ್ನವಾಗಬೇಕಾದರೆ, ಬೆಂಕಿಯಲ್ಲಿ ಬೇಯಬೇಕು. ಸಾಧಕನೂ ಅಷ್ಟೆ, ಕಷ್ಟಗಳಲ್ಲಿ ನೋಯಬೇಕು, ಸವಾಲುಗಳನ್ನೆದುರಿಸಿ ಕಾದಬೇಕು, ಬೀಳಬೇಕು, ಮೈಕೊಡವಿ ಏಳಬೇಕು. ಇದಕ್ಕೆ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್(Arshad Nadeem) ಅವರ ಸಾಧನೆಯೇ ಉತ್ತಮ ನಿದರ್ಶನ.
ಹೌದು, ಜಾವೆಲಿನ್ ಖರೀದಿಸಲು ಹಣವಿಲ್ಲದೆ ಪರದಾಟ ನಡೆಸಿದ್ದ ಅರ್ಷದ್ ನದೀಮ್ ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ಸಾಧನೆ. ಶುಕ್ರವಾರ ತಡರಾತ್ರಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಫೈನಲ್ ಸ್ಪರ್ಧೆಯಲ್ಲಿ ಹೊಸ ಒಲಿಂಪಿಕ್ಸ್ ದಾಖಲೆಯನ್ನು ನಿರ್ಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ತಾವು ಇಷ್ಟು ದಿನ ಪಟ್ಟ ಎಲ್ಲ ಕಷ್ಟಗಳಿಗೂ ಪ್ರತಿಫಲ ದೊರೆಯುಂತೆ ಮಾಡಿದರು.
ಬಡತನದ ಬೆಂಕಿಯಲ್ಲಿ ಅರಳಿದ ಪ್ರತಿಭೆ
ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್ ಚಾನುವಿನಲ್ಲಿನ ಬಡ ಪಂಜಾಬಿ ಕುಟುಂಬದಲ್ಲಿ ಜನಿಸಿದ ಅರ್ಷದ್ ನದೀಮ್, ಇಂದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮುಹಮ್ಮದ್ ಅಶ್ರಫ್ ಗಾರೆ ಮೇಸ್ತ್ರಿ ಆಗಿದ್ದ ಕಾರಣ, ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಅರ್ಷದ್ ನದೀಮ್ ಕೂಡ ತಂದೆಯ ಜತೆ ಗಾರೆ ಕೆಲಸವನ್ನು ಮಾಡಿದ್ದರು. ಇದರೆ ಜತೆಗೆ ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಶಾಲಾ ದಿನಗಳಿಂದಲೇ ವಿವಿಧ ಕ್ರೀಡೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅರ್ಷದ್ ನದೀಮ್, ಆರಂಭದಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಂಡಿದ್ದದ್ದರಂತೆ. 7ನೇ ತರಗತಿಯಲ್ಲಿದ್ದ ಸಂದರ್ಭದಲ್ಲಿ ಅಥ್ಲೆಟಿಕ್ಸ್ ಕೋಚ್ ರಶೀದ್ ಅಹ್ಮದ್ ಸಾಕಿ ಅವರ ಕಣ್ಣಿಗೆ ಬಿದ್ದು ನಾನು ಅಂತಿವಾಗಿ ಜಾವೆಲಿನ್ ಎಸೆತವನ್ನು ಆಯ್ಕೆ ಮಾಡಿಕೊಂಡೆ ಎಂದು ನದೀಮ್ ಚಿನ್ನದ ಪದಕ ಗೆದ್ದ ಬಳಿಕ ಹೇಳಿಕೊಂಡರು.
ದೇಣಿಗೆ ಸಂಗ್ರಹಿಸಿದ ಹಣದಲ್ಲಿ ಜಾವೆಲಿನ್ ಖರೀದಿ…
ಅರ್ಷದ್ ಇಂದು ಏನೇ ಸಾಧನೆ ಮಾಡಿದ್ದರೂ ಕೂಡ ಒಂದು ಕಾಲದಲ್ಲಿ ಅವರು ಜಾವೆಲಿನ್ ಖರೀದಿ ಮಾಡಲೂ ಕೂಡ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಜತೆಗೆ ತರಬೇತುದಾರರು ಕೂಡ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅರ್ಷದ್ ನೆರವಿಗೆ ಬಂದದ್ದು ಅವರ ಊರಿನ ಗ್ರಾಮಸ್ಥರು. ತಾವು ಕೂಡಿಟ್ಟ ಹಣದಲ್ಲಿ ಅರ್ಷದ್ಗೆ ಜಾವೆಲಿನ್ ಖರೀದಿಸಲು ಹಣದ ನೆರವು ನೀಡಿದ್ದರು. ಜತೆಗೆ ವಿವಿಧ ಕೂಟಗಳಲ್ಲಿ ಪಾಲ್ಗೊಳ್ಳಲು ಅರ್ಷದ್ಗೆ ಹಣದ ಅವಶ್ಯಕತೆ ಬೇಕಿದ್ದ ಸಂದರ್ಭದಲ್ಲಿ ಸಹಾಯ ಮಾಡಿದ್ದರು.
ಪಾಕ್ ಸರ್ಕಾರದಿಂದಲೇ ಸಿಗದ ನೆರವು
ಅರ್ಷದ್ ಅವರು ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹಲವು ಪದಕಗಳನ್ನು ಗೆದ್ದು ಕೊಟ್ಟರು ಕೂಡ ಪಾಕಿಸ್ತಾನ ಸರ್ಕಾರ ಅವರಿಗೆ ಕಿಂಚಿತ್ತು ಹಣಕಾಸಿಕ ನೆರವು ನೀಡಲೇ ಇಲ್ಲ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಯೂ ನದೀಮ್ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರಿಗೆ ಪಾಕ್ ಸರ್ಕಾರದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ಊರಿನ ಜನರಿಂದ ಸಿಕ್ಕ ಹಣಕಾಸಿಕ ನೆರವಿನಿಂದ ಟೋಕಿಯೊದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ 5ನೇ ಸ್ಥಾನ ಪಡೆದಿದ್ದರು. ಈ ಬಾರಿ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.
ಇದನ್ನೂ ಓದಿ Neeraj Chopra : ನೀರಜ್ ಚೋಪ್ರಾಗೆ ರಜತ ಪದಕ; ಪಾಕಿಸ್ತಾನದ ನದೀಮ್ಗೆ ಒಲಿಂಪಿಕ್ ದಾಖಲೆಯ ಬಂಗಾರ
ಇದೀಗ ಅರ್ಷದ್ ಖಾನ್, ಎಲ್ಲಾ ಕಷ್ಟ ಮತ್ತು ಸವಾಲುಗಳನ್ನು ಮೆಟ್ಟಿನಿಂತು ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್ ದಾಖಲೆಯೊಂದಿಗೆ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನ ಭಾರತದ ಬದ್ಧ ಎದುರಾಳಿಯಾಗಿದ್ದರೂ ಕೂಡ ಅರ್ಷದ್ ಸಾಧನೆ ನಮಗೆಲ್ಲ ಸ್ಫೂರ್ತಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ.
ನೀರಜ್, ಭಾರತ ಎಂದರೆ ಪ್ರೀತಿ
ಅರ್ಷದ್ ಅವರು ಇಂದು ಸಾಧನೆ ಮಾಡುವಲ್ಲಿ ನೀರಜ್ ಚೋಪ್ರಾ ಅವರ ಸಹಾಯವೂ ಕೂಡ ಇದೆ. 5 ತಿಂಗಳ ಹಿಂದೆ ಜಾವೆಲಿನ್ ಖರೀದಿಸಲು ಹೆಣಗಾಡುತ್ತಿದ್ದ ವೇಳೆ ನೀರಜ್ ಅವರು ಅರ್ಷದ್ಗೆ ಬೆಂಬಲ ಸೂಚಿಸಿದ್ದರು. ಚಿನ್ನ ಗೆದ್ದಾಗಲೂ ಕೂಡ ಈ ಸಾಧನೆಗೆ ನನ್ನ ಗೆಳೆಯ ನೀರಜ್ ಅವರೇ ಸ್ಫೂರ್ತಿ ಎಂದು ಹೇಳುವ ಮೂಲಕ ನೀರಜ್ ಸಹಾಯವನ್ನು ನೆನೆಸಿಕೊಂಡರು. ಅರ್ಷದ್ಗೆ ಭಾರತದ ಮೇಲೆ ಅಪಾರ ಗೌರವ ಮತ್ತು ಪ್ರೀತಿ ಇದೆ. ಹಿಂದೊಮ್ಮ ಅವರು ಸಂದರ್ಶನದಲ್ಲಿ ಈ ಮಾತನ್ನು ಹೇಳಿದ್ದರು. ನೀರಜ್ ಅವರ ತಾಯಿ ಸರೋಜ್ ಕೂಡ ಅರ್ಷದ್ ಚಿನ್ನ ಗೆದ್ದಾಗ ಸಂತಸ ವ್ಯಕ್ತಪಡಿಸಿ ಆತನೂ ಕೂಡ ನನ್ನ ಮಗನಿದ್ದಂತೆ ಎಂದು ಹೇಳುವ ಹೃದಯ ಗೆದ್ದಿದ್ದಾರೆ.