ಡಬ್ಲಿನ್: ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಶ್ದೀಪ್ ಸಿಂಗ್(Arshdeep Singh) ಅವರು ಭಾನುವಾರ ನಡೆದ ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ(Ireland vs India, 2nd T20) ವಿಕೆಟ್ ಪಡೆಯುವ ಮೂಲಕ ಜಸ್ಪ್ರೀತ್ ಬುಮ್ರಾ(Jasprit Bumrah) ಅವರ ದಾಖಲೆಯನ್ನು ಮುರಿದಿದ್ದಾರೆ. ಜತೆಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಮೊದಲ ಭಾರತೀಯ ಬೌಲರ್
ಮಲಾಹೈಡ್‌ನ ವಿಲೇಜ್(The Village, Dublin) ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಐರ್ಲೆಂಡ್ನ ಆರಂಭಿಕ ಆಟಗಾರ ಆಂಡ್ರ್ಯೂ ಬಾಲ್ಬಿರ್ನಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತೀಯ ಬೌಲರ್ಗಳ ಬೆವರಿಳಿಸುತ್ತಿದ್ದರು. ಈ ವೇಳೆ ಅವರ ಅಬ್ಬರ ಆಟಕ್ಕೆ ಅರ್ಶ್ದೀಪ್ ಸಿಂಗ್ ಅವರು ಬ್ರೇಕ್ ಹಾಕಿದರು. ಅವರ ವಿಕೆಟ್ ಕೀಳುತ್ತಿದ್ದಂತೆ ಜಸ್ಪ್ರೀತ್ ಬುಮ್ರಾ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದರು. ಟಿ20 ಕ್ರಿಕೆಟ್ನಲ್ಲಿ ಅತಿ ಕಡಿಮೆ ಪಂದ್ಯಗಳನ್ನಾಡಿ 50 ವಿಕೆಟ್ ಪೂರ್ತಿಗೊಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.
5ನೇ ಬೌಲರ್
ಜಸ್ಪ್ರೀತ್ ಬುಮ್ರಾ ಅವರು ಈ ಮೈಲುಗಲ್ಲನ್ನು 41 ಪಂದ್ಯಗಳಲ್ಲಿ ನಿರ್ಮಿಸಿದ್ದರು. ಆದರೆ ಅರ್ಶ್ದೀಪ್ ಸಿಂಗ್ 33 ಪಂದ್ಯಗಳಲ್ಲಿ ಬುಮ್ರಾ ಸಾಧನೆಯನ್ನು ಮೀರಿ ನಿಂತರು. ಜತೆಗೆ 50 ವಿಕೆಟ್‌ಗಳನ್ನು ಪೂರ್ತಿಗೊಳಿಸಿದ 5ನೇ ಭಾರತೀಯ ಆಟಗಾರ(Team India Cricket Player) ಎನಿಸಿಕೊಂಡರು. ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಜೂಲನ್ ಗೋಸ್ವಾಮಿ ಉಳಿದ ನಾಲ್ವರು ಈ ಸಾಧನೆ ಮಾಡಿದ ಭಾರತೀಯ ಆಟಗಾರರಾಗಿದ್ದಾರೆ.
ಏಕಾಂಗಿ ಹೋರಾಟ ನಡೆಸಿದ್ಧ ಬಾಲ್ಬಿರ್ನಿ
ತಂಡದ ಗೆಲುವಿಗಾಗಿ ಏಕಾಂಗಿಯಾಗಿ ಕ್ರೀಸ್ ಕಚ್ಚಿ ನಿಂತು ಹೋರಾಡಿದ ಆಂಡ್ರ್ಯೂ ಬಾಲ್ಬಿರ್ನಿ 72 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಮತ್ತು 5 ಸಿಕ್ಸರ್ ಸಿಡಿಯಿತು. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್(58) ಅವರ ಸೊಗಸಾದ ಅರ್ಧಶತಕ ಮತ್ತು ಸಂಜು ಸ್ಯಾಮ್ಸನ್(40) ಹಾಗೂ ರಿಂಕು ಸಿಂಗ್(38) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಜವಾಬಿತ್ತ ಐರ್ಲೆಂಡ್ ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಶರಣಾಯಿತು.
ಪಾಂಡ್ಯ ದಾಖಲೆ ಮುರಿದ ಬುಮ್ರಾ
ಐರ್ಲೆಂಡ್ ಚೇಸಿಂಗ್ ವೇಳೆ ಮಾರಕ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 4 ಓವರ್ ಎಸೆದು ಒಂದು ಮೇಡನ್ ಸಹಿತ ಕೇವಲ 15 ರನ್ ವೆಚ್ಚದಲ್ಲಿ 2 ವಿಕೆಟ್ ಕೆಡವಿದರು. ಈ ವಿಕೆಟ್ ಕಲೆಹಾಕುತ್ತಲೇ ಬುಮ್ರಾ ಅವರು ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರು. ಜತೆಗೆ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿದರು. ಪಾಂಡ್ಯ ಅವರು 73 ವಿಕೆಟ್‌ಗಳನ್ನು ಪಡೆದು ಈ ಹಿಂದೆ ಮೂರನೇ ಸ್ಥಾನದಲ್ಲಿದ್ದರು ಇದೀಗ ಬುಮ್ರಾ 74 ವಿಕೆಟ್ ಕಿತ್ತು ಮೂರನೇ ಸ್ಥಾನಕ್ಕೇರಿದ್ದಾರೆ. ಪಾಂಡ್ಯ ಒಂದು ಸ್ಥಾನ ಕುಸಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಆರ್ ಅಶ್ವಿನ್ 72 ವಿಕೆಟ್‌ಗಳನ್ನು ಕೆಡವಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.