Site icon Vistara News

Arshdeep Singh: ಕೌಂಟಿ ಕ್ರಿಕೆಟ್​ನಲ್ಲಿ ಚೊಚ್ಚಲ ವಿಕೆಟ್ ಪಡೆದ ಅರ್ಶ್​ದೀಪ್​ ಸಿಂಗ್​​; ಘಾತಕ ಬೌಲಿಂಗ್​ನ ವಿಡಿಯೊ ವೈರಲ್​

arshdeep singh County championship

ಲಂಡನ್​: ಭಾರತ ಕ್ರಿಕೆಟ್​ ತಂಡದ ಯುವ ಎಡಗೈ ವೇಗಿ ಅರ್ಶ್​​ದೀಪ್​ ಸಿಂಗ್(Arshdeep Singh)​ ಅವರು ಕೌಂಟಿ ಕ್ರಿಕೆಟ್​ನಲ್ಲಿ(County Championship) ಚೊಚ್ಚಲ ವಿಕೆಟ್​ ಕಿತ್ತು ಸಂಭ್ರಮಿಸಿದ್ದಾರೆ. ಕೆಂಟ್(Kent) ಕೌಂಟಿ ಕ್ರಿಕೆಟ್ ಕ್ಲಬ್‌ ಪರ ಕಣಕ್ಕಿಳಿದ ಅವರು ಸರ್ರೆ ತಂಡದ ಆಟಗಾರ ಬೆನ್ ಫೋಕ್ಸ್(Ben Foakes) ಅವರ ವಿಕೆಟ್​ ಕೀಳುವ ಮೂಲಕ ಈ ಸಾಧನೆ ಮಾಡಿದರು.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದ ಕಾರಣ ಕೆಂಟ್ (Kent) ತಂಡ ಈ ವರ್ಷದ ಕೌಂಟಿ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಅರ್ಶ್​ದೀಪ್​​ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಮೊದಲ ಇನಿಂಗ್ಸ್​ನಲ್ಲಿ 14.2 ಓವರ್ ಬೌಲಿಂಗ್ ನಡೆಸಿರುವ ಅವರು 43 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ.

ಕೌಂಟಿ ಕ್ರಿಕೆಟ್​ ಆಡಿದ ಬಗ್ಗೆ ಹರ್ಷವ್ಯಕ್ತಪಡಿಸಿದ ಅರ್ಶ್​​ದೀಪ್, “ಪ್ರಥಮ ದರ್ಜೆ ಪಂದ್ಯದಲ್ಲಿ ನನ್ನ ಕೌಶಲ್ಯವನ್ನು ಸುಧಾರಿಸಲು ಇದು ಉತ್ತಮ ಅವಕಾಶವಾಗಿದೆ. ರೆಡ್​ ಬಾಲ್​ ಕ್ರಿಕೆಟ್​ಗೆ ಇದು ನನ್ನ ಪ್ರಥಮ ಹೆಜ್ಜೆ” ಎಂದು ಹೇಳುವ ಮೂಲಕ ಭಾರತ ಪರ ಟೆಸ್ಟ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಟೀಮ್​ ಇಂಡಿಯಾದ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಅವರ ಸಲಹೆ ಕಾರಣದಿಂದ ಅರ್ಶ್​ದೀಪ್​ ಕೌಂಟಿ ಆಡುತ್ತಿದ್ದಾರೆ.

ಇದನ್ನೂ ಓದಿ IPL 2023: ಅರ್ಶ್​ದೀಪ್​ ಸಿಂಗ್​ ಮುರಿದ ಸ್ಟಂಪ್​ಗಳ ಬೆಲೆ ಎಷ್ಟು?

ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ ಅರ್ಶ್​ದೀಪ್​ ಅವರು ಮುಂಬೈ ವಿರುದ್ಧದ ಪಂದ್ಯದ ವೇಳೆ ಘಾತಕ ಬೌಲಿಂಗ್​ ದಾಳಿ ನಡೆಸಿ ಬ್ಯಾಕ್​ಟು ಬ್ಯಾಕ್ 2 ಸ್ಟಂಪ್​ಗಳನ್ನು ಮುರಿದು ಹಾಕಿದ್ದರು. ವಿಶ್ವದ ಹಲವು ಕ್ರಿಕೆಟ್​ ಆಟಗಾರರು ಕೂಡ ತಮ್ಮ ಕ್ರಿಕೆಟ್​ ಪ್ರದರ್ಶನ ಕುಂಠಿತಗೊಂಡಾಗ ಕೌಂಟಿ ಆಡಿ ಮತ್ತೆ ಫಾರ್ಮ್​ ಕಂಡುಕೊಂಡಿದ್ದಾರೆ. ಇದೀಗ ಅರ್ಶ್​ದೀಪ್​ ಸಿಂಗ್​ ಕೂಡ ಈ ಟೂರ್ನಿಯಲ್ಲಿ ಆಡುವ ಮೂಲಕ ತಮ್ಮ ಬೌಲಿಂಗ್​ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

Exit mobile version