ಮುಂಬಯಿ: ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ (INDvsWI) ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ. ಮುಂದಿನ ಅಕ್ಟೋಬ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023ರ ಉದ್ದೇಶದೊಂದಿಗೆ ಕೆಲವು ಹೆಸರುಗಳನ್ನು ಪ್ರಕಟಿಸಲಾಗಿದೆ. ವಿಂಡೀಸ್ ಸರಣಿಯಿಂದಲೇ ಅವರಿಗೆ ಸಜ್ಜಾಗುವಂತೆ ಅವರಿಗೆ ಪರೋಕ್ಷ ಸೂಚನೆ ಕೊಟ್ಟಿದೆ. ಇವೆಲ್ಲದರ ನಡುವೆ ಎಡಗೈ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಅವರ ಹೆಸರು ಕಾಣೆಯಾಗಿದೆ. ಇದು ಚರ್ಚೆಗೆ ಕಾರಣವಾಗಿದ್ದು ಮುಂದಿನ ವಿಶ್ವ ಕಪ್ ಯೋಜನೆಯಲ್ಲಿ ಅವರು ಇಲ್ಲವೆ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ. ಭಾರತ ತಂಡದಲ್ಲಿ ಎಡಗೈ ಬೌಲರ್‌ಗಳ ಕೊರತೆ ಇದೆ. ಇದ್ದದ್ದರಲ್ಲಿ ಅರ್ಶ್‌ದೀಪ್ ಸಿಂಗ್ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದರು. ಆದರೆ ಪದೇ ಪದೆ ನೋ ಬಾಲ್ ಎಸೆಯುತ್ತಿದ್ದ ಅವರು ಟೀಕೆಗೆ ಒಳಗಾಗಿದ್ದರು. ಅದುವೇ ಅವರಿಗೆ ಮುಳುವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಉಮ್ರಾನ್ ಮಲಿಕ್ ಮತ್ತು ಋತುರಾಜ್ ಗಾಯಕ್ವಾಡ್ ಅವರಂತಹ ಆಟಗಾರರನ್ನು ತಂಡಕ್ಕೆ ಸೇರಿಕೊಳ್ಳಲಾಗಿದೆ. ಆದರೆ, ಕೌಂಟಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವ ವೇಗಿ ಅರ್ಶ್‌ದೀಪ್ ಸಿಂಗ್‌ಗೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ಹೊಸ ಚರ್ಚೆಗೆ ಕಾರಣವಾಗಿದೆ.
ವಿಶೇಷವೆಂದರೆ, ಅರ್ಶ್‌ದೀಪ್ ಸಿಂಗ್ ಕಳೆದ ವರ್ಷ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದರು. ಅವರು ಫೆಬ್ರವರಿಯಿಂದ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನೂ ಆಡಿಲ್ಲ. ಐಪಿಎಲ್‌ನಲ್ಲಿ ಈ ಬಾರಿ ಆಡಿದ್ದರೂ ಗಮನ ಸೆಳೆಯುಂಥ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ಕೈ ಬಿಡಲಾಯಿತೇ ಎಂದು ಪ್ರಶ್ನಿಸಲಾಗುತ್ತಿದೆ. ಐಪಿಎಲ್ ಮಾನದಂಡದ ಆಧಾರದಲ್ಲಿಯೇ ಆಟಗಾರರನ್ನು ಆಯ್ಕೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ.
ಇದನ್ನೂ ಓದಿ : Asia Cup: ಏಷ್ಯಾ ಕಪ್ ವಿಚಾರದಲ್ಲಿ ಹೊಸ ಕ್ಯಾತೆ ತೆಗೆದ ಪಾಕಿಸ್ತಾನ; ಟೂರ್ನಿ ನಡೆಯುವುದೇ ಅನುಮಾನ
ಕಳೆದ ಎರಡು ಅಂತಾರಾಷ್ಟ್ರೀಯ ಸರಣಿಗಳಲ್ಲಿ ಅರ್ಶ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಲಯ ಕಾಪಾಡಿಕೊಳ್ಳುವುದಕ್ಕೆ ಹೆಣಗಾಡಿದ್ದರು. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಸರಣಿಗಳಲ್ಲಿ ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಅವರ ನಿರಂತರ ನೋಬಾಲ್‌ಗಳನ್ನು ಎಸೆಯುವ ಮೂಲಕ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ದ್ರಾವಿಡ್ ಅವರಿಗೆ ನಿರಾಸೆ ಮೂಡಿಸಿದ್ದರು.
ತಂಡದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಗಾಯದಿಂದಾಗಿ ರಿಷಭ್ ಪಂತ್ ಅಲಭ್ಯರಾಗಿರುವುದರಿಂದ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್‌ಗಳಾಗಿ ತಂಡ ಸೇರಿಕೊಂಡಿದ್ದಾರೆ. ಏಕದಿನ ಸರಣಿಯಲ್ಲಿ ವೇಗದ ಬೌಲರ್ ಆಗಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲಿದ್ದಾರೆ. ವೇಗಿ ಉಮ್ರಾನ್ ಮಲಿಕ್ ಮತ್ತು ಮುಖೇಶ್ ಕುಮಾರ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಏಕದಿನ ಸರಣಿ ಜುಲೈ 27 ರಂದು ಬಾರ್ಬಡೋಸ್‌ನಲ್ಲಿ ಪ್ರಾರಂಭವಾಗಲಿದೆ.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.
ಏಕ ದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಶಮಿ. ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.