Site icon Vistara News

Virat Kohli : ವಿರಾಟ್​ ಕೊಹ್ಲಿಯ ಹೊಸ ಟ್ಯಾಟೂ ಅರ್ಥ ತಿಳಿಸಿದ ಆರ್ಟಿಸ್ಟ್​ ಸನ್ನಿ, ಏನಿದೆ ವಿನ್ಯಾಸದಲ್ಲಿ?

Artist Sunny explained the meaning of Virat Kohli's new tattoo, what's in the design?

#image_title

ಬೆಂಗಳೂರು: ಭಾರತ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (Virat Kohli) ತಮ್ಮ ಬಲ ಮೊಣಕೈ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿ ಮುಕ್ತಾಯಗೊಂಡ ಬಳಿಕ ಐಪಿಎಲ್​ ಆರಂಭಕ್ಕೆ ಮೊದಲು ಕೆಲವೊಂದು ದಿನಗಳು ಭಾರತ ತಂಡದ ಆಟಗಾರರಿಗೆ ವಿಶ್ರಾಂತಿ ಲಭಿಸಿತ್ತು. ಈ ಅವಧಿಯಲ್ಲಿ ಅವರು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಟ್ಯಾಟೂ ಅಭಿಮಾನಿಗಳ ಕಣ್ಮನ ಸೆಳೆಯುತ್ತಿದೆ. ಅದೇನಿರಬಹುದು ಎಂಬ ಕುತೂಹಲ ಕೆರಳಿಸಿದೆ. ಮುಂಬಯಿ ಇಂಡಿಯನ್ಸ್​ ವಿರುದ್ಧದ ಐಪಿಎಲ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಜೇಯ 82 ಬಾರಿಸಿದ ವೇಳೆಯೂ ಅವರ ಟ್ಯಾಟೂ ವೈರಲ್​ ಆಗಿತ್ತು. ಇದೀಗ ಆ ಟ್ಯಾಟೂ ವಿನ್ಯಾಸ ಏನೆಂಬುದು ಬಯಲಾಗಿದ್ದು, ಟ್ಯಾಟೂ ಆರ್ಟಿಸ್ಟ್ ಅದರ ಗುಟ್ಟನ್ನು ಬಹಿರಂಗ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದು ಏಲಿಯನ್ಸ್​ ಟ್ಯಾಟೂ ಸ್ಟುಡಿಯೊದಲ್ಲಿ. ಅದರ ಸ್ಥಾಪಕ ಸನ್ನಿ ಭಾನುಶಾಲಿ ವಿರಾಟ್​​ ಕೊಹ್ಲಿ ಕೈಯಲ್ಲಿ ತಮ್ಮ ಕಲಾತ್ಮಕತೆಯನ್ನು ಪ್ರದರ್ಶಿಸಿದ್ದಾರೆ. ಇದೀಗ ಅವರು ವಿರಾಟ್​ ಕೊಹ್ಲಿಯ ಕೈಗೆ ಯಾವ ಚಿತ್ರ ಬಿಡಿಸಿದ್ದೇನೆ ಎಂಬುದನ್ನು ತಮ್ಮ ವೆಬ್​ಸೈಟ್​ ಮೂಲಕ ಪ್ರಕಟಿಸಿದ್ದಾರೆ.

ವಿರಾಟ್​ ಕೊಹ್ಲಿಗೆ ತಮ್ಮ ಹಳೆಯ ಟ್ಯಾಟೂ ಅನ್ನು ಮರೆಮಾಚುವ ಉದ್ದೇಶವಿತ್ತು. ಹೀಗಾಗಿ ಅದಕ್ಕಾಗಿ ಹೊಸ ವಿನ್ಯಾಸವನ್ನು ಮಾಡಿದೆವು. ಅವರ ಹೊಸ ಟ್ಯಾಟೂ ಅಧ್ಯಾತ್ಮವನ್ನು ಪ್ರತಿಬಿಂಬಿಸುತ್ತದೆ. ಇದು ಎಲ್ಲಾ ವಸ್ತುಗಳ ಅಂತರ್​ಸಂಪರ್ಕವನ್ನು ಪ್ರತಿನಿಧಿಸುವ ಮತ್ತು ಸೃಷ್ಟಿಯ ಮೂಲವನ್ನು ವಿವರಿಸುತ್ತದೆ. ಏಕತೆಯನ್ನು, ಜೀವನದ ರಚನೆ ಹಾಗೂ ಎಲ್ಲದರ ಮೂಲವನ್ನು ಹೇಳುತ್ತದೆ ಎಂದು ಸನ್ನಿ ಭಾನುಶಾಲಿ ಬರೆದುಕೊಂಡಿದ್ದಾರೆ.

ಟ್ಯಾಟೂ ವಿರಾಟ್​ ಕೊಹ್ಲಿಯ ಕೈಯಲ್ಲಿ ನಾನಾ ಅರ್ಥವನ್ನು ಹೇಳುತ್ತದೆ ಹಾಗೂ ಅದನ್ನು ಪ್ರತಿನಿಧಿಸಲು ಅವರು ಅರ್ಹರು ಕೂಡ. ಅವರ ಕೈಯಲ್ಲಿ ವಿನ್ಯಾಸ ಮಾಡುವುದಕ್ಕೆ ನನ್ನ ಆತ್ಮ ಮತ್ತು ಹೃದಯವನ್ನು ಬಳಸಿಕೊಂಡಿದ್ದೇನೆ. ಪ್ರತಿಯೊಂದು ವಿನ್ಯಾಸವೂ ಅದ್ಭುತವಾಗಿ ಮೂಡಿ ಬರುವಂತೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಎರಡು ಹಂತದಲ್ಲಿ ವಿನ್ಯಾಸ

ವಿರಾಟ್​ ಕೊಹ್ಲಿಯ ಕೈಯಲ್ಲಿ ಎರಡು ಹಂತಗಳಲ್ಲಿ ಟ್ಯಾಟೂ ಬಿಡಿಸಲಾಗಿದೆ. ಮೊದಲ ಹಂತವನ್ನು ಮುಂಬಯಿಯಲ್ಲಿ ಪೂರ್ಣಗೊಳಿಸಲಾಗಿತ್ತು. ಅದನ್ನು ಮಾಡಲು ಸನ್ನಿ ಅವರು ಆರು ಗಂಟೆಗಳ ಅವಧಿಯನ್ನು ತೆಗೆದುಕೊಂಡಿದ್ದರು. ವಿರಾಟ್​ ಕೊಹ್ಲಿ ಸ್ಟುಡಿಯೊದಲ್ಲಿ ಇದ್ದಷ್ಟು ವೇಳೆ ಭದ್ರಾಪಡೆಯ ನೆರವು ಪಡೆದುಕೊಂಡು ಸ್ಟುಡಿಯೊವನ್ನು ಹೊರಗಿನಿಂದ ಮುಚ್ಚಿಸಲಾಗಿತ್ತು. ಮುಂದಿನ ಹಂತವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಅದಕ್ಕಾಗಿ 8 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳಲಾಗಿತ್ತು.

ಇದನ್ನೂ ಓದಿ : IPL 2023: ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ವಿರಾಟ್​ ಕೊಹ್ಲಿ; ಏನದು?

ವಿರಾಟ್​ ಕೊಹ್ಲಿ ಟ್ಯಾಟೂ ಹಾಕುವ ಪ್ರಕ್ರಿಯೆ ವೇಳೆ ಸಂಪೂರ್ಣ ಸಹಕಾರ ನೀಡಿದ್ದರು. ಪ್ರತಿಯೊಂದ ವಿನ್ಯಾಸ ಮುಗಿದಾಗಲೂ ಅವರು ಖುಷಿ ಪಡುತ್ತಿದ್ದರು ಎಂದು ಸನ್ನಿ ಬರೆದುಕೊಂಡಿದ್ದಾರೆ.

ಅಚ್ಚರಿಯೆಂದರೆ ಆಧ್ಯಾತ್ಮಿಕ ಸಂಗತಿಗಳನ್ನು ತಮ್ಮ ಜೀವನಕ್ಕೆ ಹತ್ತಿರವಾಗಿಸಿಕೊಂಡಿರುವ ವಿರಾಟ್​ ಕೊಹ್ಲಿ ಅದರಲ್ಲಿ ಸಾಕಷ್ಟು ಯಶಸ್ಸು ಪಡೆಯುತ್ತಿದ್ದಾರೆ. ಹೊಸ ಟ್ಯಾಟೂ ಬಿಡಿಸಿದ ಬಳಿಕ ಅವರು ಮುಂಬಯಿ ಇಂಡಿಯನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ 82 ರನ್​ ಬಾರಿಸಿದ್ದಾರೆ.

ವಿರಾಟ್​ ಕೊಹ್ಲಿ ತಮ್ಮ ಸ್ಟುಡಿಯೊದಲ್ಲಿ ಟ್ಯಾಟೂ ಬಿಡಿಸಿಕೊಂಡಿದ್ದಕ್ಕೆ ಸನ್ನಿ ಧನ್ಯವಾದ ಹೇಳಿದ್ದಾರೆ. ದಿಗ್ಗಜ ಕ್ರಿಕೆಟಿಗನಿಗೆ ವಿನ್ಯಾಸ ಮಾಡಲು ಅವಕಾಶ ಸಿಕ್ಕಿರುವುದು ದೊಡ್ಡ ಭಾಗ್ಯ ಎಂದು ಅಂದುಕೊಂಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Exit mobile version