Site icon Vistara News

Ashes 2023 : ಮೂರನೇ ದಿನದಾಟಕ್ಕೆ ಮಳೆಯ ಅಡ್ಡಿ, ಮೇಲುಗೈ ಸಾಧಿಸಿದ ಆಸ್ಟ್ರೇಲಿಯಾ

Ashes 2023

ಲಂಡನ್​: ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ತಂಡಗಳ ನಡುವೆ ನಡೆಯುತ್ತಿರುವ ಆ್ಯಶಸ್​ ಸರಣಿಯ (Ashes 2023) ಎರಡನೇ ಪಂದ್ಯದ ಮೂರನೇ ದಿನ ಮಳೆಯ ಅಡಚಣೆ ಉಂಟಾಯಿತು. ಹೀಗಾಗಿ ನಿಗದಿತ ಅವಧಿಗಿಂತ ಮೊದಲೇ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅದಕ್ಕಿಂತ ಮೊದಲು ಎರಡನೇ ಇನಿಂಗ್ಸ್​ ಬ್ಯಾಟಿಂಗ್ ಮುಂದುವರಿಸಿರುವ ಆಸೀಸ್​ ಪಡೆ 2 ವಿಕೆಟ್​ ನಷ್ಟಕ್ಕೆ 130 ರನ್ ಬಾರಿಸಿದ್ದು 221 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಇಲ್ಲಿನ ಐತಿಹಾಸಿಕ ಲಾರ್ಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸುತ್ತಿದೆ. ಮೊದಲ ಇನಿಂಗ್ಸ್​​ನಲ್ಲಿ 416 ರನ್ ಬಾರಿಸಿದ್ದ ಆಸೀಸ್​ ಬಳಗ, ಎದುರಾಳಿ ಇಂಗ್ಲೆಂಡ್​ ತಂಡವನ್ನು 325 ರನ್​ಗಳಿಗೆ ನಿಯಂತ್ರಿಸಿತು. ಬಳಿಕ ಬ್ಯಾಟ್​ ಮಾಡುತ್ತಿದ್ದು ಆರಂಭಿಕ ಬ್ಯಾಟರ್​ ಉಸ್ಮಾನ್ ಖವಾಜಾ (58) ಮತ್ತೊಂದು ಸೊಗಸಾದ ಅರ್ಧ ಶತಕ ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಕಲ್ಪಿಸಿದ್ದಾರೆ. ಡೇವಿಡ್​ ವಾರ್ನರ್ 25 ರನ್ ಬಾರಿಸಿದ್ದರೆ ಮರ್ಸನ್​ ಲಾಬುಶೇನ್​ 30 ರನ್​ ಬಾರಿಸಿ ಔಟಾಗಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ ಶತಕ ಬಾರಿಸಿದ್ದ ಸ್ಟಾರ್ ಬ್ಯಾಟರ್​ ಸ್ಟೀವ್ ಸ್ಮಿತ್​ 6 ರನ್​ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಬೇಗನೆ ವಿಕೆಟ್​ ಕಳೆದುಕೊಳ್ಳುವ ಮೂಲಕ ಹಿನ್ನಡೆಗೆ ಒಳಗಾಗಿರುವ ಇಂಗ್ಲೆಂಡ್​ ತಂಡ ಪ್ರವಾಸಿ ತಂಡದ ಬ್ಯಾಟರ್​​ಗಳನ್ನು ಔಟ್​ ಮಾಡುವುದಕ್ಕೆ ಪೇಚಾಡುತ್ತಿದ್ದಾರೆ. ಆದರೆ, ತಳವೂರಿ ಬ್ಯಾಟ್​ ಮಾಡುತ್ತಿರುವ ಆಸ್ಟ್ರೇಲಿಯಾ ತಂಡದ ಆಟಗಾರರು ಆತಿಥೇಯ ತಂಡದ ತಂತ್ರಗಳನ್ನು ಉಲ್ಟಾ ಮಾಡುತ್ತಿದ್ದಾರೆ. ಮೊದಲ ಪಂದ್ಯದ ಸೋಲಿನ ಕಾರಣ 0-1 ಹಿನ್ನಡೆಯಲ್ಲಿರುವ ಇಂಗ್ಲೆಂಡ್ ತಂಡಕ್ಕೆ ಈ ಗೆಲುವು ಸರಣಿಯಲ್ಲಿ ಅಧಿಕಾರ ಸ್ಥಾಪಿಸಲು ಅಗತ್ಯವಾಗಿತ್ತು. ಆದರೆ, ತವರಿನ ನೆಲದಲ್ಲಿ ಗೆಲ್ಲಲು ಹಾಕಿಕೊಂಡ ಬಜ್​ಬಾಲ್​ ತಂತ್ರ ಕೈಕೊಟ್ಟಿದೆ.

ಬ್ಯಾಟಿಂಗ್ ವೈಫಲ್ಯ

ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್​ನಲ್ಲಿ ಪೇರಿಸಿದ್ದ 416 ರನ್​ಗಳಿಗೆ ಪ್ರತಿಯಾಗಿ ಬ್ಯಾಟ್​ ಮಾಡಿದ್ದ ಇಂಗ್ಲೆಂಡ್ ತಂಡ ಎರಡನೇ ದಿನದ ಅಂತ್ಯಕ್ಕೆ 4 ವಿಕೆಟ್​ ನಷ್ಟ ಮಾಡಿಕೊಂಡು 278 ರನ್ ಬಾರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಮೂರನೇ ದಿನ ಮತ್ತಷ್ಟು ರನ್​ಗಳನ್ನು ಬಾರಿಸಿ ಮುನ್ನಡೆ ಕಾಪಾಡಿಕೊಳ್ಳುವ ಯೋಜನೆಯಲ್ಲಿತ್ತು. ಆದರೆ, ಮೂರನೇ ದಿನದ ಮೊದಲ ಸೆಷನ್​ನಲ್ಲಿ ಕೇವಲ 47 ರನ್​ಗಳಿಗೆ ಉಳಿದ ಆರು ವಿಕೆಟ್​ಗಳನ್ನು ನಷ್ಟ ಮಾಡಿಕೊಂಡ ಇಂಗ್ಲೆಂಡ್​ ತಂಡ ಹಿನ್ನಡೆಗೆ ಒಳಗಾಯಿತು. ಹ್ಯಾರಿ ಬ್ರೂಕ್​ (50) ಅರ್ಧ ಶತಕ ಬಾರಿಸಿದ ಹೊರತಾಗಿಯೂ ಉಳಿದ ಆಟಗಾರರಿಂದ ನೆರವು ಸಿಗಲಿಲ್ಲ. ನಾಯಕ ಬೆನ್​ ಸ್ಟೋಕ್ಸ್​ ಮತ್ತೊಂದು ಬಾರಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದು 17 ರನ್​ಗಳಿಗೆ ಸೀಮಿತಗೊಂಡರು. ಎರಡನೇ ದಿನದಲ್ಲಿ ಬಾರಿಸಿದ್ದ ರನ್​ಗೆ ತೃಪ್ತಿ ಪಟ್ಟ ಅವರು ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ : Ashes 2023 : ಸುಸ್ಥಿತಿಯಲ್ಲಿ ಇಂಗ್ಲೆಂಡ್​ ತಂಡ; ಆಸ್ಟ್ರೇಲಿಯಾ ತಂಡಕ್ಕೆ ಇನ್ನೂ 138 ರನ್​ಗಳ ಮುನ್ನಡೆ

ವಿಕೆಟ್​ ಕೀಪರ್​ ಬ್ಯಾಟರ್ ಜಾನಿ ಬೇರ್​ಸ್ಟೋವ್​ ಫಾರ್ಮ್​ ಕಳೆದುಕೊಂಡಿರುವುದು ಮತ್ತೊಂದು ಬಾರಿ ಸಾಬೀತಾಯಿತು. ಅವರು 16 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಸ್ಟುವರ್ಟ್​ ಬ್ರಾಡ್​ 12 ಬಾರಿಸಿದರು. ಒಲಿ ರಾಬಿನ್ಸನ್​ 9 ರನ್​ ಕೊಡುಗೆ ಕೊಟ್ಟರು.

ಆಸ್ಟ್ರೇಲಿಯಾ ತಂಡದ ಪರ ಬೌಲಿಂಗ್​ನಲ್ಲಿ ಮಿಚೆಲ್​ ಸ್ಟಾರ್ಕ್​ 3 ವಿಕೆಟ್​ ಉರುಳಿಸಿದರೆ ಹೇಜಲ್​ವುಡ್​ 2 ವಿಕೆಟ್​ ಪಡೆದರು. ಟ್ರಾವಿಡ್​ ಹೆಡ್​ 2 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version