ಲಂಡನ್: ಆ್ಯಶಸ್ ಸರಣಿ (Ashesh 2023) ಎರಡನೇ ಪಂದ್ಯವೂ ಕುತೂಹಲಕಾರಿ ಹಂತಕ್ಕೆ ತಲುಪಿದೆ. ಪಂದ್ಯದ ಕೊನೇ ದಿನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಗೆಲುವಿಗೆ 257 ರನ್ ಬೇಕಾಗಿದೆ. ಈಗಾಗಲೇ ನಾಲ್ಕು ವಿಕೆಟ್ಗಳು ಉರುಳಿರುವ ಕಾರಣ ಇನ್ನುಳಿದ ಆರು ವಿಕೆಟ್ಗಳಲ್ಲಿ ಗುರಿಯನ್ನು ಸಾಧಿಸುವ ಸವಾಲು ಬೆನ್ಸ್ಟೋಕ್ಸ್ ಪಡೆಗೆ ಎದುರಾಗಿದೆ. ಅತ್ತ ಆಸ್ಟ್ಟ್ರೇಲಿಯಾ ತಂಡದ ಬೌಲರ್ಗಳು ಕೂಡ ಗೆಲುವಿಗಾಗಿ ಸಾಹಸ ಮಾಡುತ್ತಿದ್ದು, ಕೊನೇ ದಿನ ಮತ್ತಷ್ಟು ಪ್ರಖರ ದಾಳಿ ನಡೆಸುವ ಮುನ್ಸೂಚನೆ ಕೊಟ್ಟಿದ್ದಾರೆ.
Stiff ask awaits England on day five after Australia's strong bowling performance ✨#WTC25 | #ENGvAUS 📝: https://t.co/liWqlPCKqn pic.twitter.com/lRnYWywa5x
— ICC (@ICC) July 1, 2023
ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯ ನಾಲ್ಕನೇ ದಿನವಾದ ಶನಿವಾರ ಎರಡನೇ ಇನಿಂಗ್ಸ್ನಲ್ಲಿ 279 ರನ್ ಗಳಿಸಿ ಆಲ್ಔಟ್ ಆದ ಆಸ್ಟ್ರೇಲಿಯಾ ತಂಡ 371 ರನ್ಗಳ ಗುರಿಯನ್ನು ಆತಿಥೇಯ ತಂಡಕ್ಕೆ ಒಡ್ಡಿತು. ಅಂತೆಯೇ ದಿನದಾಟ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 114 ರನ್ ಬಾರಿಸಿದೆ. ಜಾಕ್ ಕ್ರಾವ್ಲಿ (3), ಒಲಿ ಪೋಪ್ (3) ಹಾಗೂ ಜೋ ರೂಟ್ (18) ಬೇಗನೆ ವಿಕೆಟ್ ಒಪ್ಪಿಸಿದ್ದಾರೆ. ಹಿಂದಿನ ಇನಿಂಗ್ಸ್ನಲ್ಲಿ ಅರ್ಧ ಶತಕ ಬಾರಿಸಿದ್ದ ಹ್ಯಾರಿ ಬ್ರೂಕ್ (4) ಕೂಡ ಔಟಾಗಿದ್ದಾರೆ. ಕೊನೇ ದಿನ ಪಿಚ್ ಇನ್ನಷ್ಟು ಬೌಲಿಂಗ್ಗೆ ನೆರವಾಗುವ ಸಾಧ್ಯತೆಗಳಿವೆ. ಹೀಗಾಗಿ ಆಸ್ಟ್ತೇಲಿಯಾ ತಂಡಕ್ಕೆ ಗುರಿ ಮುಟ್ಟುವುದು ದೊಡ್ಡ ಸವಾಲೆನಿಸಿದೆ.
ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ಹಿನ್ನಡೆಗೆ ಕಾರಣರಾಗಿದ್ದಾರೆ. ಏತನ್ಮಧ್ಯೆ, ಬೆನ್ ಡಕೆಟ್ (50) ಹಾಗೂ ನಾಯಕ ಬೆನ್ ಸ್ಟೋಕ್ಸ್ (17) ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ : World Cup 2023 : ಇದು ಆಘಾತಕಾರಿ ಸುದ್ದಿ; ಭಾರತದಲ್ಲಿ ನಡೆಯುವ ವಿಶ್ವ ಕಪ್ಗೆ ವೆಸ್ಟ್ ಇಂಡೀಸ್ ತಂಡ ಇಲ್ಲ!
‘ಅದಕ್ಕಿಂತ ಮೊದಲು ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲು ವಿಫಲರಾದರು. ಮೂರನೇ ದಿನದ ಆಟದ ಕೊನೆಯಲ್ಲಿ 2 ವಿಕೆಟ್ ನಷ್ಟಕ್ಕೆ 130 ರನ್ ಬಾರಿಸಿದ್ದ ಆಸೀಸ್ ಬ್ಯಾಟರ್ಗಳು ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ಗೆ ತಲೆ ಬಾಗಿದರು. ಚಹಾ ವಿರಾಮಕ್ಕೆ ಮೊದಲು 101. 5 ಓವರ್ಗಳಲ್ಲಿ 279 ರನ್ಗಳಿಗೆ ಆಲ್ಔಟ್ ಆದರು. ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ 77 ರನ್ ಬಾರಿಸಿದರೆ ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ 34 ರನ್ಗಳಿಗೆ ಇನಿಂಗ್ಸ್ ಕೊನೆಗೊಳಿಸಿದರು. ಕ್ಯಾಮೆರೂನ್ ಗ್ರೀನ್ 18 ರನ್ ಕೊಡುಗೆ ಕೊಟ್ಟರೆ, ಅಲೆಕ್ಸ್ ಕ್ಯೇರಿ 21 ರನ್ ಗಳಿಸಿದರು. ಮಿಚೆಲ್ ಸ್ಟಾರ್ಕ್ 15 ರನ್ ಬಾರಿಸಿದರು.
ಇಂಗ್ಲೆಂಡ್ ತಂಡದ ಪರ ಬೌಲಿಂಗ್ನಲ್ಲಿ ಸ್ಟುವರ್ಟ್ ಬ್ರಾಡ್ 4 ವಿಕೆಟ್ ಉರುಳಿಸಿದರೆ ಜೋಶ್ ಟಂಗ್ ಹಾಗೂ ಒಲಿ ರಾಬಿನ್ಸನ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.