ಹೆಡಿಂಗ್ಲೆ: ಈಗಾಗಲೇ 5 ಪಂದ್ಯಗಳ ಆ್ಯಶಸ್(Ashes 2023) ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತಿರುವ ಇಂಗ್ಲೆಂಡ್ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲು ಸಜ್ಜಾಗಿದೆ. ಸೋತರೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗಕ್ಕೆ ಒಳಗಾಗಲಿದೆ. 2 ಪಂದ್ಯಗಳನ್ನು ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮತ್ತು ನಿರಾಳವಾಗಿರುವ ಆಸೀಸ್ ತಂಡ ಈ ಪಂದ್ಯದಲ್ಲಿಯೂ ಗೆದ್ದು ಆಂಗ್ಲರಿಗೆ ಸೋಲಿನ ಶಾಕ್ ನೀಡುವ ಯೋಜನೆಯಲ್ಲಿದೆ.
ಬೇರ್ಸ್ಟೋ ರನೌಟ್ ವಿಚಾರದಲ್ಲಿ ಉಭಯ ತಂಡಗಳು ಕ್ರೀಡಾಸ್ಫೂರ್ತಿ ವಿಚಾರದಲ್ಲಿ ಕಚ್ಚಾಡಿಕೊಂಡಿದ್ದವು. ಜತೆಗೆ ಎರಡೂ ದೇಶಗಳ ಪ್ರಧಾನಿಗಳ ಮಧ್ಯೆಯೂ ಇದೇ ವಿಚಾರವಾಗಿ ಪರಸ್ಪರ ಟ್ವಿಟ್ ಸಮರ ನಡೆದಿತ್ತು. ಹೀಗಾಗಿ ಮೂರನೇ ಪಂದ್ಯ ಇತ್ತಂಡಗಳಿಗೂ ಸೇಡಿನ ಪಂದ್ಯವಾಗಿದೆ. ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಮೂರು ಬದಲಾವಣೆ ಮಾಡಿಕೊಂಡಿದೆ. ಕ್ರಿಸ್‌ವೋಕ್ಸ್, ಮಾರ್ಕ್ ವುಡ್ ಮತ್ತು ಮೊಯಿನ್ ಅಲಿ ತಂಡಕ್ಕೆ ಮರಳಿದ್ದಾರೆ. ಗಾಯಾಳು ಓಲೀ ಪೋಪ್, ಆ್ಯಂಡರ್ಸನ್ ಮತ್ತು ಜೋಶ್ ಟಂಗ್ ಅವರನ್ನು ಕೈಬಿಡಲಾಗಿದೆ. ಆಸೀಸ್ ಪರ ನಥಾನ್ ಲಿಯೋನ್ ಬದಲು ಟಾಡ್ ಮರ್ಫಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಲಾರ್ಡ್ಸ್ ಪಂದ್ಯದಲ್ಲಿ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಮೊಯಿನ್ ಅವರು ಮತ್ತೆ ತಂಡ ಸೇರಿದ್ದಾರೆ. ಅವರ ಆಗಮನದಿಂದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಹೆಚ್ಚಿನ ಬಲ ಬಂದಿದೆ. ಈ ಪಂದ್ಯದಲ್ಲಿ ಅವರು ಎರಡು ವಿಕೆಟ್ ಪಡೆದರೆ ಟೆಸ್ಟ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಿದ ಸಾಧನೆ ಮಾಡಲಿದ್ದಾರೆ.
ಲಿಯೋನ್ ಅವರು ತಂಡದಿಂದ ಹೊರಬಿದ್ದ ಕಾರಣ ಅವರ ಬದಲಿಗೆ ಟಾಡ್ ಮರ್ಫಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಒಂದೊಮ್ಮೆ ಅವರಿಗೆ ಆಡುವ ಅವಕಾಶ ಸಿಕ್ಕರೆ ಇದು ಅವರ ಪದಾರ್ಪಣ ಆ್ಯಶಸ್ ಪಂದ್ಯವಾಗಲಿದೆ. 22 ವರ್ಷದ ಆಫ್-ಸ್ಪಿನ್ನರ್ ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಹಮನಾರ್ಹ ಪ್ರದರ್ಶನ ತೋರಿದ್ದರು. ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ ಪ್ರಮುಖ ಏಳು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಸದ್ಯ ಆಸೀಸ್ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ಮರ್ಫಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದಾರೆ.
Full focus on tomorrow.
— England Cricket (@englandcricket) July 5, 2023
Full focus on the task at hand. #EnglandCricket | #Ashes pic.twitter.com/opqEgCzUrB
ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್(ನಾಯಕ), ಜೇಮ್ಸ್ ಆ್ಯಂಡರ್ಸನ್, ಜಾನಿ ಬೇರ್ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಜಾಕ್ ಕ್ರಾಲಿ, ಬೆನ್ ಡಂಕೆಟ್, ಮೊಯಿನ್ ಅಲಿ, ಓಲಿ ಪೋಪ್, ಓಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಾಂಗ್, ಡ್ಯಾನ್ ಲಾರೆನ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೊಲೆಂಡ್, ಅಲೆಕ್ಸ್ ಕೇರಿ, ಕ್ಯಾಮರೂನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮಿಚೆಲ್ ನಾಸೀರ್, ಜಿಮ್ಮಿ ಪೀರ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.