ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇದೇ ವರ್ಷ ತವರಿನಲ್ಲಿ ನಡೆಯುವ ಆ್ಯಶಸ್ ಟೆಸ್ಟ್(Ashes 2023) ಸರಣಿಯ ಕುರಿತು ಮಾತನಾಡಿದ್ದು, 8 ಮಂದಿ ವೇಗಿಗಳನ್ನು ತಂಡದಲ್ಲಿ ಹೊಂದುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಸೋಲು ಕಂಡಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಸ್ಟೋಕ್ಸ್ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಲು ಮುಂದಾಗಿದ್ದಾರೆ.
ಸದ್ಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಬೆನ್ ಸ್ಟೋಕ್ಸ್ ಸಂದರ್ಶನವೊಂದರಲ್ಲಿ ಮುಂಬರುವ ಆ್ಯಶಸ್ ಟೆಸ್ಟ್ ಬಗ್ಗೆ ಮಾತನಾಡಿ, “ಆಸೀಸ್ ವಿರುದ್ಧ ತವರಿನಲ್ಲಿ ನಡೆಯುವ ಆ್ಯಶಸ್ ಸರಣಿಗೆ 8 ಮಂದಿ ವೇಗಿಗಳನ್ನು ಹೊಂದುವ ಬಗ್ಗೆ ಚಿಂತಿಸಿದ್ದೇನೆ. ಈ ವಿಚಾರವನ್ನು ಈಗಾಗಲೇ ತಂಡದ ಆಯ್ಕೆ ಸಮಿತಿಗೆ ಮತ್ತು ಕೋಚ್ಗೆ ತಿಳಿಸಿದ್ದೇನೆ. ಪ್ರತೀ ಪಂದ್ಯದಲ್ಲೂ ಸೂಕ್ತ ಆಟಗಾರರನ್ನು ಬಳಸುವ ಬಗ್ಗೆ ನಾನು ಯೋಜನೆ ರೂಪಿಸಿದ್ದೇನೆ” ಎಂದು ಹೇಳಿದರು.
ಐದು ಪಂದ್ಯಗಳ ಆ್ಯಶಸ್ ಸರಣಿಯು ಜೂನ್ 16 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುತ್ತದೆ. 2021-22 ರಲ್ಲಿ ಜೋ ರೂಟ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡ 4-0 ಅಂತರದ ಸೋಲು ಕಂಡಿತ್ತು. ಇದೇ ಸೋಲಿಗೆ ಸ್ಟೋಕ್ಸ್ ಅವರು ಸೇಡು ತೀರಿಸಲು ಕಾತರರಾಗಿದ್ದಾರೆ. 2019ರಲ್ಲಿ ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಆರ್ಚರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದರೆ ಈ ಸರಣಿಯ ವೇಳೆ ಆರ್ಚರ್ ಮೊಣಕೈ ಮತ್ತು ಬೆನ್ನಿನ ಗಾಯಕ್ಕೆ ತುತ್ತಾಗಿ ಸುಮಾರು 2 ವರ್ಷ ತಂಡದಿಂದ ಹೊರಗುಳಿದಿದ್ದರು. ಈಗ ಅವರು ಮತ್ತೆ ತಂಡಕ್ಕೆ ಮರಳಿದ್ದಾರೆ. ಇವರ ಜತೆ ಸ್ಟುವರ್ಟ್ ಬ್ರಾಡ್, ಆ್ಯಂಡರ್ಸನ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.
ಇದನ್ನೂ ಓದಿ IPL 2023: ನಾಯಕನಾಗಿ ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಡೇವಿಡ್ ವಾರ್ನರ್
ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಕೋಚ್ ಆಗಿ ಕಿವೀಸ್ನ ಬ್ರೆಂಡನ್ ಮೆಕಲಮ್ ಆಯ್ಕೆಯಾದ ಬಳಿಕ ತಂಡ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಮೆಕಲಮ್ ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡ ಆಡಿದ 12 ಟೆಸ್ಟ್‌ಗಳಲ್ಲಿ 10 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಇದೀಗ ಆ್ಯಶಸ್ ಸರಣಿಯಲ್ಲಿಯೂ ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕವಾಗಿದೆ.