Site icon Vistara News

Ashes 2023: ಉಸ್ಮಾನ್​ ಖವಾಜ ಶತಕ; ಆಂಗ್ಲರಿಗೆ ತಿರುಗೇಟು ನೀಡುತ್ತಿರುವ ಆಸೀಸ್​

ashes 2023

ಲಂಡನ್​: ಆರಂಭಿಕ ಆಟಗಾರ ಉಸ್ಮಾನ್​ ಖವಾಜ(Usman Khawaja) ಅವರ ಅಜೇಯ ಶತಕದ ನೆರವಿನಿಂದ ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ ತಂಡ 311 ರನ್​ ಗಳಿಸಿದೆ. ಆದರೆ ಇನ್ನೂ 82 ರನ್​ಗಳ ಹಿನ್ನಡೆಯಲ್ಲಿದೆ. ಮೊದಲು ಬ್ಯಾಟಿಂಗ್​ ನಡೆಸಿದ್ದ ಇಂಗ್ಲೆಂಡ್​ 8 ವಿಕೆಟ್​ಗೆ 393 ರನ್​ ಗಳಿಸಿ ಮೊದಲ ದಿನವೇ ಡಿಕ್ಲೇರ್​ ಘೋಷಿಸಿತ್ತು.

ಮೊದಲ ದಿನದಾಟದ ಅಂತ್ಯಕ್ಕೆ 4 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 14 ರನ್​ ಗಳಿಸಿದ್ದಲ್ಲಿಂದ ಶನಿವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ 5 ವಿಕೆಟ್​ಗೆ 311 ರನ್​ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ಆಸ್ಟ್ರೇಲಿಯಾ ಪರ ಉಸ್ಮಾನ್​ ಖವಾಜ(126*) ಅಜೇಯ ಶತಕ ಬಾರಿಸಿ ಮಿಂಚಿದರೆ, ಅಲೆಕ್ಸ್​ ಕೇರಿ(52*) ಅರ್ಧಶತಕ ಬಾರಿಸಿದ್ದಾರೆ. ಉಭಯ ಆಟಗಾರರು ಅಜೇಯ ಬ್ಯಾಟಿಂಗ್​ ಕಾಯ್ದುಕೊಂಡಿದ್ದು ಮೂರನೇ ದಿನವಾದ ಭಾನುವಾರವೂ ತಮ್ಮ ಬ್ಯಾಟಿಂಗ್​ ಪ್ರತಾಪವನ್ನು ಮುಂದುವರಿಸುವ ಸಾಧ್ಯತೆ ಅಧಿಕವಾಗಿದೆ.

ಭಾರತ ವಿರುದ್ಧದ ಟೆಸ್ಟ್​ ಫೈನಲ್​ನಲ್ಲಿ ಶತಕ ಬಾರಿಸಿ ಮೆರೆದಾಡಿದ್ದ ಸ್ಟೀವನ್​ ಸ್ಮಿತ್​(16), ಮಾರ್ನಸ್​ ಲಬುಶೇನ್​(0) ಆರಂಭಿಕ ಆಟಗಾರ ಡೇವಿಡ್​ ವಾರ್ನರ್​(9) ಅಗ್ಗಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಟ್ರಾವಿಸ್​ ಹೆಡ್​ ಅರ್ಧಶತಕ ಬಾರಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದರು. ಇಂಗ್ಲೆಂಡ್​ ಪರ ಸ್ಟುವರ್ಟ್​ ಬ್ರಾಡ್​ ಮತ್ತು ನಿವೃತ್ತಿಯಿಂದ ವಾಪಸ್​ ಬಂದ ಆಲ್​ ರೌಂಡರ್​ ಮೊಯಿನ್​ ಅಲಿ ತಲಾ 2 ವಿಕೆಟ್​ ಉರುಳಿಸಿದ್ದಾರೆ. ನಾಯಕ ಬೆನ್​ ಸ್ಟೋಕ್ಸ್​ ಒಂದು ವಿಕೆಟ್​ ಪಡೆದಿದ್ದಾರೆ. ಹಿರಿಯ ಮತ್ತು ಅನುಭವಿ ವೇಗಿ ಜೇಮ್ಸ್​ ಆ್ಯಂಡರ್ಸನ್​ ಅವರು ಕಮಾಲ್ ಮಾಡುವಲ್ಲಿ ಎಡವಿದ್ದಾರೆ.

ಇದನ್ನೂ ಓದಿ Ashes 2023 : ಐಪಿಎಲ್​ನಲ್ಲಿ ಫೇಲ್​, ಆ್ಯಶಸ್​​ನಲ್ಲೂ ವಿಚಿತ್ರ ರೀತಿಯಲ್ಲಿ ಔಟ್​; ಇಂಗ್ಲೆಂಡ್​ ಬ್ಯಾಟರ್​ನ ಬ್ಯಾಡ್​ಲಕ್​!

ಶುಕ್ರವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ 8 ವಿಕೆಟ್​ ನಷ್ಟಕ್ಕೆ 393 ರನ್​ ಗಳಿಸಿ ಡಿಕ್ಲೇರ್​ ಹೇಳಿತ್ತು. ಇಂಗ್ಲೆಂಡ್​ ಪರ ಜೋ ರೂಟ್​ 152 ಬಾಲ್​ನಲ್ಲಿ 118 ರನ್​, ಜಾನಿ ಬ್ರೆಸ್ಟೋವ್​ 78, ಜಾಕ್ ಕ್ರಾಲಿ ​61 ರನ್​ ಗಳಿಸಿ ಮಿಂಚಿದ್ದರು. ಶತಕ ಬಾರಿಸಿದ ಜೋ ರೂಟ್​ ಹಲವು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದರು.

Exit mobile version