Site icon Vistara News

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

Ashutosh Sharma

ಬೆಂಗಳೂರು: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿರುವ​ ಪಂಜಾಬ್​ ಕಿಂಗ್ಸ್(Punjab Kings)​ ತಂಡದ ಅಶುತೋಷ್‌ ಶರ್ಮ(Ashutosh Sharma) ಕ್ರಿಕೆಟ್​ ಆಡುವುದಕ್ಕು ಮುನ್ನ ಅಂಪೈರಿಂಗ್​ ಮಾಡಿ ಜೀವನ ಸಾಗಿಸುತ್ತಿದ್ದರು. ಕ್ರಿಕೆಟ್​ನಲ್ಲಿ ಅವಕಾಶ ಕಡಿಮೆಯಾದಾಗ 6 ತಿಂಗಳು ಖಿನ್ನತೆಗೂ ಒಳಗಾಗಿದ್ದರು.

ಹಾದು, ಅಶುತೋಷ್‌ ಮಧ್ಯಪ್ರದೇಶ ಮೂಲದವರು. ಬಡಕುಟುಂಬದಲ್ಲಿ ಜನಿಸಿದ ಅಶುತೋಷ್‌ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟರ್ ಆಗಬೇಕೆನ್ನುವ ಕನಸು ಇಟ್ಟುಕೊಂಡೆ ಬೆಳೆದವರು. ಕ್ರಿಕೆಟ್​ಗಾಗಿಯೇ ಅವರು ಇಂದೋರ್‌ಗೆ ಶಿಫ್ಟ್ ಆದರು. ಆರಂಭಿಕ ಹಂತದಲ್ಲಿ ಅಶುತೋಷ್‌ ಸ್ಥಳೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಅಂಪೈರಿಂಗ್ ವೃತ್ತಿ ಆರಂಭಿಸಿದರು. ಜತೆಗೆ ತಮ್ಮ ನೆಚ್ಚಿನ ಕ್ರಿಕೆಟ್​ ಕೂಡ ಆಡುತ್ತಾ ಬೆಳೆದರು.

ಟೆನಿಸ್​ ಬಾಲ್​ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇವರನ್ನು ಮಧ್ಯಪ್ರದೇಶದ ಮಾಜಿ ಕ್ರಿಕೆಟಿಗ, ಅಮಾಯ್ ಖುರೇಸಿಯಾ ಗುರುತಿಸಿ ದೇಶೀಯ ಕ್ರಿಕೆಟ್​ಗೆ ಪರಿಚಯಿಸಿದರು. ಖುರೇಸಿಯಾ ಗರಡಿಯಲ್ಲೇ ಪಳಗಿದ ಅಶುತೋಷ್‌, 2018ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ಪರ ಆಡಿ ತಂಡದ ಪರ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಪ್ರದರ್ಶನ ತೋರಿದರೂ ಕೂಡ 2019ರಲ್ಲಿ ತಂಡದಿಂದ ಕೈಬಿಡಲಾಯಿತು. ಇದರಿಂದ ತೀವ್ರವಾಗಿ ನೊಂದುಕೊಂಡ ಅವರು 6 ತಿಂಗಳ ಕಾಲ ಖಿನ್ನತೆಯಿಂದಲೂ ಬಳಲಿದ್ದರು.

ತವರು ತಂಡದಲ್ಲಿ ಸ್ಥಾನ ಸಿಗದ ಕಾರಣ ರೈಲ್ವೇಸ್​ ಪರ ಆಡುವ ಅವಕಾಶ ಪಡೆದರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ 50 ರನ್ ಸಿಡಿಸಿ ತಮ್ಮ ಬ್ಯಾಟಿಂಗ್​ ಪರಾಕ್ರಮ ತೋರಿಸಿದ್ದರು.

ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಪಂಜಾಬ್​ ಕಿಂಗ್ಸ್​ ಇವರನ್ನು ಕೇವಲ 20 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. ಆರಂಭದಲ್ಲಿ ಇವರನ್ನು ಇಂಪ್ಯಾಕ್ಟ್​ ಆಟಗಾರನನ್ನಾಗಿ ಪಂಜಾಬ್​ ಕಣಕ್ಕಿಳಿಸಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಇವರು ಇದೀಗ ತಂಡದ ಪ್ರಮುಖ ಆಟಗಾರನಾಗಿ ಸ್ಥಾನ ಪಡೆಯುತ್ತಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಸ್​ಪ್ರೀತ್​ ಬುಮ್ರಾ ಎಸೆತಕ್ಕೆ ಸ್ವೀಪ್​ ಶಾಟ್​ ಮೂಲಕ ಸಿಕ್ಸರ್​ ಬಾರಿಸಿದ್ದು ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿತ್ತು. ಏಕೆಂದರೆ ಬುಮ್ರಾ ಅವರ ಘಾತಕ ಬೌಲಿಂಗ್​ಗೆ ಯಾರು ಕೂಡಚ ಇದುವರೆಗೆ ಈ ಶಾಟ್​ ಹೊಡೆದಿರಲಿಲ್ಲ. ಈ ಪ್ರತಿಭಾವಂತ ಆಟಗಾರ ಸಾಧನೆಗೆ ಸ್ವತಃ ಬುಮ್ರಾ ಅವರೇ ಪಂದ್ಯದ ಮುಕ್ತಾಯದ ಬಳಿಕ ಕೈ ಮುಗಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸದ್ಯ 4 ಐಪಿಎಲ್ ಪಂದ್ಯ ಆಡಿರುವ ಇವರು 156 ರನ್ ಬಾರಿಸಿದ್ದಾರೆ. ಮಿಂಚಿನ ಬ್ಯಾಟಿಂಗ್​ ಮೂಲಕ ಎಲ್ಲರ ಗಮನಸೆಳೆಯುತ್ತಿರುವ 25 ವರ್ಷದ, ಶಾಂತ ಸ್ವಭಾವದ ಈ ಬಿಗ್​ ಹಿಟ್ಟರ್​ ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಪರ ಆಡಿದರೂ ಅಚ್ಚರಿಯಿಲ್ಲ.

Exit mobile version