ಬಾರ್ಬಡೋಸ್ : ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ (ind vs wi) ಆಯ್ಕೆಯಾಗಿರುವ ಭಾರತ ತಂಡ ಆಟಗಾರರ ಪೈಕಿ ಕೆಲವರು ಶನಿವಾರ ಬಾರ್ಬಡೋಸ್ಗೆ ತಲುಪಿದ್ದಾರೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಶನಿವಾರ ಕೆರಿಬಿಯನ್ ದ್ವೀಪ ತಲುಪಿದ್ದಾರೆ.. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಲಂಡನ್ ಮತ್ತು ಪ್ಯಾರಿಸ್ನಿಂದ ಅಮೆರಿಕ ಮತ್ತು ನೆದರ್ಲ್ಯಾಂಡ್ಸ್ ಮೂಲಕ ವಿವಿಧ ವಿಮಾನಗಳಲ್ಲಿ ವೆಸ್ಟ್ ಇಂಡೀಸ್ ತಲುಪಲಿದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ಪ್ಯಾರಿಸ್ ಮತ್ತು ಲಂಡನ್ನಿಂದ ಹಾರಲಿದ್ದಾರೆ. ಇಬ್ಬರು ಹಿರಿಯ ಆಟಗಾರರು ಯಾವಾಗ ವೆಸ್ಟ್ ಇಂಡೀಸ್ ತಲುಪುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೋಹಿತ್ ಮತ್ತು ಕೊಹ್ಲಿ ಪ್ರಸ್ತುತ ತಮ್ಮ ರಜಾದಿನಗಳನ್ನು ತಮ್ಮ ಕುಟುಂಬಗಳೊಂದಿಗೆ ಕಳೆಯುತ್ತಿದ್ದಾರೆ ಇಂಡಿಯನ್ ಎಕ್ಸ್ಪ್ರೆಸ್ ವರದಿಗಳ ಪ್ರಕಾರ, ಇವರಿಬ್ಬರು ಮುಂದಿನ ವಾರ ಕೆರಿಬಿಯನ್ ದ್ವೀಪ ತಲುಪಲಿದ್ದಾರೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ, ಭಾರತವು ಜುಲೈ 5 ಮತ್ತು 6 ರಂದು ಕೆನ್ಸಿಂಗ್ಟನ್ ಓವಲ್ನಲ್ಲಿ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಜುಲೈ 1 ರಿಂದ 7 ರವರೆಗೆ ಒಂದು ವಾರಗಳ ಭಾರತ ತಂಡದ ತರಬೇತಿ ಶಿಬಿರಕ್ಕೆ ಬಾರ್ಬಡೋಸ್ ತಿಥ್ಯ ವಹಿಸಲಿದೆ.
2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯನ್ನು ವಿಂಡೀಸ್ ವಿರುದ್ಧ ರೋಹಿತ್ ಶರ್ಮಾ ಸಾರಥ್ಯದ ತಂಡ ಆರಂಭಿಸಲಿದೆ. ಭಾರತ ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ನಲ್ಲಿ ಸೋತಿತ್ತು. ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತು. ಭಾರತ ಮತ್ತು ವೆಸ್ಟ್ ಇಂಡೀಸ್ 98 ಬಾರಿ ಮುಖಾಮುಖಿಯಾಗಿದ್ದು, ಭಾರತ 22 ಬಾರಿ ಗೆದ್ದಿದ್ದರೆ, ವಿಂಡೀಸ್ 30 ಬಾರಿ ಗೆಲುವು ಸಾಧಿಸಿದೆ.
ಇದನ್ನೂ ಓದಿ : World Cup 2023 : ಇದು ಆಘಾತಕಾರಿ ಸುದ್ದಿ; ಭಾರತದಲ್ಲಿ ನಡೆಯುವ ವಿಶ್ವ ಕಪ್ಗೆ ವೆಸ್ಟ್ ಇಂಡೀಸ್ ತಂಡ ಇಲ್ಲ!
ಉಭಯ ತಂಡಗಳು 2019 ರಲ್ಲಿ ಈ ಹಿಂದೆ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ವೈಟ್ವಾಷ್ ಮಾಡಿತ್ತು. ಈ ಬಾರಿಯೂ ರೋಹಿತ್ ಶರ್ಮಾ ಆ್ಯಂಡ್ ಕೋ ಮೇಲುಗೈ ಸಾಧಿಸುವ ಅವಕಾಶ ಹೊಂದಿದೆ ಆದಾಗ್ಯೂ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಇಲ್ಲದೆ ಭಾರತದ ವೇಗದ ದಾಳಿ ಸ್ವಲ್ಪ ಹಿನ್ನಡೆ ಹೊಂದಿದೆ. ವೇಗದ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಸಿರಾಜ್ ಅವರ ಮೇಲಿದ್ದು, ಶಾರ್ದೂಲ್ ಠಾಕೂರ್, ಉನಾದ್ಕಟ್, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ ಅವರಿಗೆ ನೆರವು ನೀಡಲಿದ್ದಾರೆ.