ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ (IND vs PAK) ಏಷ್ಯಾ ಕಪ್ ಪಂದ್ಯದ ಜಾಹೀರಾತು ಬೆಲೆಯೂ ಉಳಿದ ಎಲ್ಲ ಪಂದ್ಯಗಳ ಜಾಹೀರಾತು ದರಕ್ಕಿಂತ ದುಪ್ಪಟ್ಟಾಗಿದೆ. ಭಾನುವಾರ ರಾತ್ರಿ ನಡೆಯುವ ಪಂದ್ಯದ ವೇಳೆ ಪ್ರಸಾರವಾಗುವ ಪ್ರತಿ ೧೦ ಸೆಕೆಂಡ್‌ಗಳ ಜಾಹೀರಾತಿಗೆ ೧೮ ಲಕ್ಷ ರೂಪಾಯಿ ನಿಗದಿ ಮಾಡಿದೆ ಎಂದು ಹೇಳಲಾಗಿದೆ.
ಹಾಲಿ ಆವೃತ್ತಿಯ ಏಷ್ಯಾ ಕಪ್‌ಗೆ ನೇರ ಪ್ರಸಾರದ ಹಕ್ಕು ಪಡೆದುಕೊಂಡಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಡ್ರಿಮ್ ಇಲೆವೆನ್, ರಾಜಶ್ರೀ ಪಾನ್ ಮಸಾಲಾ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಪ್ರಾಯೋಜಕತ್ವದ ಒಪ್ಪಂದ ಮಾಡಿಕೊಂಡಿದೆ. ಎಲ್‌ಐಸಿ ಹಾಗೂ ಥಮ್ಸ್‌ಅಪ್ ಜತೆ ಸಹಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ. ಈ ಎಲ್ಲ ಬ್ರಾಂಡ್‌ಗಳ ಜಾಹೀರಾತು ಬೆಲೆ ೧೦ ಸೆಕೆಂಡ್‌ಗೆ ೧೬ರಿಂದ ೧೮ ಲಕ್ಷ ರೂಪಾಯಿ ಇರಲಿದೆ ಎಂದು ಕ್ರೀಡಾ ವೆಬ್‌ಸೈಟ್ ಒಂದು ವರದಿ ಮಾಡಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೆ ನೇರ ಪ್ರಸಾರದ ಹಕ್ಕಿನ ಬೆಲೆ ಹೆಚ್ಚಿರುತ್ತದೆ. ಅಂತೆಯೇ ಜಾಹೀರಾತು ದರವೂ ಸಿಕ್ಕಾಪಟ್ಟೆ ಏರಿಕೆಯಾಗುತ್ತದೆ. ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ನಡುವಿನ ೧೦ ಸೆಕೆಂಡ್‌ಗಳ ಜಾಹೀರಾತಿಗೆ ೨೫ ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಅದು ಇದುವರೆಗಿನ ಗರಿಷ್ಢ ದರದ ದಾಖಲೆಯಾಗಿದೆ.
ಅಬ್ಬರದ ವಿಚಾರಕ್ಕೆ ಬಂದಾಗ ವಿಶ್ವ ಕಪ್ ಹಾಗೂ ಏಷ್ಯಾ ಕಪ್ ಪಂದ್ಯದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಏಷ್ಯಾ ಕಪ್‌ನ ಜಾಹೀರಾತು ಬೆಲೆ ಸ್ವಲ್ಪ ಕಡಿಮೆಯಿದೆ. ಆದಾಗ್ಯೂ ಅದು ೨೦ ಲಕ್ಷ ರೂಪಾಯಿಗೆ ಸಮೀಪವಿದೆ.
ಇದನ್ನೂ ಓದಿ | IND vs PAK | ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ಇಂಡಿಯಾ-ಪಾಕ್ ಮ್ಯಾಚ್ ನೇರ ಪ್ರದರ್ಶನ