Site icon Vistara News

Asia Cup 2023: ಪಾಕ್ ಕ್ರಿಕೆಟ್​ ಮಂಡಳಿಯ​ ಆಹ್ವಾನವನ್ನು ತಿರಸ್ಕರಿಸಿದ ಬಿಸಿಸಿಐ

bcci officials

ಮುಂಬಯಿ: ಬಹುನಿರೀಕ್ಷಿತ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿ(Asia Cup 2023) ಆಗಸ್ಟ್​ 30ರಿಂದ ಆರಂಭಗೊಳ್ಳಲಿದೆ. ಹೈಬ್ರೀಡ್​ ಮಾದರಿಯಲ್ಲಿ ನಡೆಯುವ ಈ ಟೂರ್ನಿಯ ಪಂದ್ಯಗಳು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ 4 ಪಂದ್ಯಗಳು ಹಾಗೂ ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿದೆ. ಟೂರ್ನಿಯ ಉದ್ಘಾಟನ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ(pakistan cricket board) ಬಿಸಿಸಿಐ ಅಧಿಕಾರಿಗಳನ್ನು ಆಹ್ವಾನಿಸಿದೆ. ಆದರೆ ಪಾಕ್​ನ ಈ ಮನವಿಯನ್ನು ಬಿಸಿಸಿಐ ತಿಸ್ಕರಿಸಿದೆ.

ಪಾಕ್​ ಕ್ರಿಕೆಟ್​ ಮಂಡಳಿಯ ಆಹ್ವಾನದ ಬಗ್ಗೆ ಸ್ಪಷ್ಟನೆ ನೀಡಿದ ಬಿಸಿಸಿಐ ಅಧಿಕಾರಿಯೊಬ್ಬರು, “ಹೌದು, ನಮಗೆ ಪಿಸಿಬಿಯಿಂದ ಆಹ್ವಾನ ಬಂದಿದೆ. ಆದರೆ ಈ ಸಮಯದಲ್ಲಿ, ನಾವು ಪಾಕ್​ಗೆ ಭೇಟಿ ನೀಡುವ ಸಾಧ್ಯವಿಲ್ಲ. ಆಟಗಾರರಷ್ಟೇ ಅಲ್ಲ, ಅಧಿಕಾರಿಗಳು ಕೂಡ ಪಾಕಿಸ್ತಾನಕ್ಕೆ ಭೇಟಿ ನೀಡಲು ಭಾರತ ಸರ್ಕಾರದ ಅನುಮತಿಯನ್ನು ಹೊಂದಿರಬೇಕು. ನಮಗೆ ಯಾವುದೇ ಅನುಮತಿ ಸಿಕ್ಕಿಲ್ಲ. ಹೀಗಾಗಿ ನಾನು ಪಾಕ್​ ಆಹ್ವಾನವನ್ನು ತಿರಸ್ಕರಿಸಿದ್ದೇವೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್​ಸೈಡ್​ ಸ್ಪೋರ್ಟ್ಸ್​ಗೆ ತಿಳಿಸಿದ್ದಾರೆ.

ಜಿಯೋ ನ್ಯೂಸ್ ಪ್ರಕಾರ, ಪಿಸಿಬಿ 2023ರ ಏಷ್ಯಾ ಕಪ್‌ಗೆ ರಾಜೀವ್ ಶುಕ್ಲಾ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ(roger binny) ಜತೆಗೆ ಜಯ್ ಶಾ ಅವರನ್ನು ಆಹ್ವಾನಿಸಿದೆ ಎಂದು ತಿಳಿಸಿದೆ. ಆದಾಗ್ಯೂ, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವುದರಿಂದ ಎರಡು ದೇಶದ ಕ್ರಿಕೆಟ್ ಮಂಡಳಿಗಳ ನಡುವೆ ಯಾವುದೇ ಅಧಿಕೃತ ಭೇಟಿ ನಡೆದಿಲ್ಲ. ಬಿಸಿಸಿಐ ಅಧಿಕಾರಿಗಳಲ್ಲದೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಡಳಿಯ ಸದಸ್ಯರನ್ನೂ ಪಾಕ್​ ಕ್ರಿಕೆಟ್​ ಮಂಡಳಿ ಆಹ್ವಾನಿಸಿದೆ ಎಂದು ವರದಿಯಲ್ಲಿ ತಿಳಿಸಿದೆ. ಅತಿಥಿಗಳ ಪಟ್ಟಿಯಲ್ಲಿ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜಿಯೋಫ್ ಅಲ್ಲಾರ್ಡಿಸ್ ಕೂಡ ಸೇರಿದ್ದಾರೆ.

ಜಯ್​ ಶಾಗೆ ಈ ಹಿಂದೆಯೇ ಆಹ್ವಾನ ನೀಡಿದ್ದ ಪಾಕ್​

ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ನ(Asian Cricket Council) ಅಧ್ಯಕ್ಷರಾಗಿರುವ ಜಯ್​ ಶಾ ಅವರಿಗೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ಈ ಹಿಂದೆಯೇ ಆಹ್ವಾನ ನೀಡಿದ್ದರು. ಈ ಬಗ್ಗೆ ಝಾಕಾ ಅಶ್ರಫ್ ಅವರೇ ಮಾಹಿತಿಯನ್ನೂ ಕೂಡ ನೀಡಿದ್ದರು. “ಜಯ್ ಶಾ ಅವರಿಗೆ ಏಷ್ಯಾ ಕಪ್​ ಟೂರ್ನಿಯ ಸಲುವಾಗಿ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ಕಳುಹಿಸಲಾಗಿದೆ. ಏಕೆಂದರೆ ಅವರು ಏಷ್ಯನ್​ ಕ್ರಿಕೆಟ್​ ಕೌನಿಲ್ಸ್​ನ ಅಧ್ಯಕ್ಷರಾಗಿದ್ದಾರೆ. ನಮ್ಮ ಆಹ್ವಾನದಂತೆ ಜೈ ಶಾ ಪಾಕ್​ಗೆ ಬರುವು ನಿರೀಕ್ಷೆ ಇದೆ” ಎಂದು ಹೇಳಿದ್ದರು.

ಇದನ್ನೂ ಓದಿ Asia Cup: ಪಾಕಿಸ್ತಾನಕ್ಕೆ ಬರುವಂತೆ ಜಯ್​ ಶಾಗೆ ಆಹ್ವಾನ ನೀಡಿದ ಪಾಕ್​ ಕ್ರಿಕೆಟ್​ ಮಂಡಳಿ

ಏಷ್ಯಾ ಕಪ್​ ವಿಚಾರದಲ್ಲಿ ಕಿತ್ತಾಟ

ಏಷ್ಯಾ ಕಪ್​ ವಿಚಾರದಲ್ಲಿ ಜಯ್​ ಶಾ ಮತ್ತು ಪಾಕ್​ ಕ್ರಿಕೆಟ್​ ಮಂಡಳಿ ಮಧ್ಯೆ ಮಾತಿನ ಜಟಾಪಟಿ ನಡೆದಿತ್ತು. ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಜಯ್​ ಶಾ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪಾಕ್​ ಕ್ರಿಕೆಟ್​ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಇದೇ ಕಾರಣದಿಂದ ಈ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿತ್ತು. ಅಂತಿಮವಾಗಿ ಪಾಕ್​ ಬಿಸಿಸಿಐ ಎದುರು ಸೋತು ಹೈಬ್ರೀಡ್​ ಮಾದರಿಯಲ್ಲಿ ಟೂರ್ನಿ ನಡೆಸಲು ಒಪ್ಪಿತ್ತು. ಹೀಗಾಗಿ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕ್​ನಲ್ಲಿ ಕೇವಲ ನಾಲ್ಕು ಪಂದ್ಯಗಳು ಮಾತ್ರ ನಡೆಯಲಿದೆ.

Exit mobile version