Site icon Vistara News

Asia Cup 2023: ಯೋ-ಯೋ ಟೆಸ್ಟ್​ ಪಾಸ್​ ಆದ ನಾಯಕ ರೋಹಿತ್​,ಹಾರ್ದಿಕ್​

hardik pandya and rohit sharma

ಬೆಂಗಳೂರು: ಏಷ್ಯಾಕಪ್​(Asia Cup 2023) ಹಿನ್ನಲೆಯಲ್ಲಿ ಟೀಮ್​ ಇಂಡಿಯಾ ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(NCA)ಯಲ್ಲಿ 6 ದಿನಗಳ ಕಾಲ ನಡೆಯುವ ಫಿಟ್​ನೆಸ್​ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಬುಧವಾರವೇ ಎನ್​ಸಿಎಗೆ ಬಂದರುವ ಎಲ್ಲ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ವಿಂಡೀಸ್ ವಿರುದ್ಧದ ಏಕದಿನ ಸರಣಿ ಬಳಿಕ ವಿಶ್ರಾಂತಿಯಲ್ಲಿದ್ದ ರೋಹಿತ್‌ ಶರ್ಮಾ(Rohit Sharma), ವಿರಾಟ್‌ ಕೊಹ್ಲಿ(virat kohli), ರವೀಂದ್ರ ಜಡೇಜಾ, ಹಾರ್ದಿಕ್​ ಪಾಂಡ್ಯ(Hardik Pandya) ಸೇರಿ ಎಲ್ಲ ಆಟಗಾರರು ಯೋ-ಯೋ ಟೆಸ್ಟ್​ಗೆ ಒಳಗಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ರೋಹಿತ್​-ಪಾಂಡ್ಯ ಪಾಸ್​

ಗುರುವಾರ ವಿರಾಟ್​ ಕೊಹ್ಲಿ ಅವರು ಯೋ-ಯೋ ಟೆಸ್ಟ್​ಗೆ ಒಳಪಟ್ಟ ಬಳಿಕ ನಾಯಕ ರೋಹಿತ್​ ಮತ್ತು ಪಾಂಡ್ಯ ಅವರು ಈ ಟೆಸ್ಟ್​ಗೆ ಒಳಪಟ್ಟಿದ್ದಾರೆ. ವಿರಾಟ್​ ಅವರು ಈ ಪರೀಕ್ಷೆಯಲ್ಲಿ 17.2 ಅಂಕ ಪಡೆದು ತೇರ್ಗಡೆಯಾದ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಉಪ ನಾಯಕ ಹಾರ್ದಿಕ್ ಪಾಂಡ್ಯ ಇಬ್ಬರು ಯೋ-ಯೋ ಟೆಸ್ಟ್​ನಲ್ಲಿ ಪಾಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅಂಕವನ್ನು ಮಾತ್ರ ಬಿಸಿಸಿಐ ತಿಳಿಸಿಲ್ಲ. ಕೆಎಸ್‌ಸಿಎ-ಆಲೂರು ಮೈದಾನದಲ್ಲಿ ರೋಹಿತ್ ಮತ್ತು ಹಾರ್ದಿಕ್ ಪರೀಕ್ಷೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ ಎಂದು ಪಿಟಿಐ ತಿಳಿಸಿದೆ. ಆದರೆ ಗಾಯದಿಂದ ಚೇತರಿಕೆ ಕಂಡಿರುವ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ಈ ಟೆಸ್ಟ್​ಗೆ ಒಳಪಟ್ಟಿಲ್ಲ ಎಂದು ತಿಳಿದುಬಂದಿದೆ.

ಯೋ-ಯೋ,ಡೆಕ್ಸಾ ಪರೀಕ್ಷೆ ಕಡ್ಡಾಯ

ಬಿಸಿಸಿಐ ಏಷ್ಯಾಕಪ್ ಆಡುವ 17 ಮಂದಿ ಆಟಗಾರರಿಗೆ ಬೆಂಗಳೂರಿನ ಎನ್​ಸಿಎಯಲ್ಲಿ 6 ​​ದಿನಗಳ ಶಿಬಿರವನ್ನು ಏರ್ಪಡಿಸಿದೆ. ಈ ವೇಳೆ ಎಲ್ಲ ಆಟಗಾರರು ಯೋ-ಯೋ ಟೆಸ್ಟ್‌ ಮತ್ತು ಡೆಕ್ಸಾ ಪರೀಕ್ಷೆಗೆ (ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್‌-ರೇ, ಡ್ಯುಯೆಲ್‌ ಎನರ್ಜಿ ಎಕ್ಸ್‌-ರೇ ಎಬಾಪ್ಟಿಮೆಟ್ರಿ) ಒಳಪಡೆಸಲಾಗುತ್ತದೆ. ಇದೀಗ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್​ ಅಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನಲೆ ಬಿಸಿಸಿಐ ಆಟಗಾರರು ಬೇಕಿದ್ದರೆ ಟ್ರ್ಯಾಕ್​ನಲ್ಲಿ ಓಡುವ ಫೋಟೋಗಳನ್ನು ಪೋಸ್ಟ್ ಮಾಡಬಹುದು. ಆದರೆ ಯೋ ಯೋ ಟೆಸ್ಟ್​ನಲ್ಲಿ ಪಡೆದ ಅಂಕಗಳನ್ನು ಪೋಸ್ಟ್ ಮಾಡುವುದು ನಿಯಮ ಉಲ್ಲಂಘನೆ ಎಂದು ತಿಳಿಸಿದೆ. ಹೀಗಾಗಿ ಎಲ್ಲ ಆಟಗಾರರಿಗೂ ಸ್ಪಷ್ಟ ಸಂದೇಶ ನೀಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ Asia Cup 2023: ಏಷ್ಯಾಕಪ್​ಗೂ ಮುನ್ನ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಅಯ್ಯರ್

ಕೊಹ್ಲಿಗೆ ಎಚ್ಚರಿಕೆ ನೀಡಿದ ಬಿಸಿಸಿಐ

ಆಟಗಾರರು ತಮ್ಮ ಫಿಟ್‌ನೆಸ್ ಅಂಕಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹಂಚಿಕೊಳ್ಳಬಾರದು, ತಂಡದ ಗೌಪ್ಯ ವಿಷಯವನ್ನು ಎಲ್ಲೂ ಬಹಿರಂಗ ಪಡಿಸಿಕೊಳ್ಳಬಾರದು ಎಂದು ಎಲ್ಲ ಆಟಗಾರರಿಗೂ ಟೀಮ್​ ಮ್ಯಾನೆಜ್​ಮೆಂಟ್​ ಖಡಕ್​ ಎಚ್ಚರಿಕೆ ನೀಡಿರುವುದಾಗಿ ಐಟಿಐ ವರದಿ ಮಾಡಿದೆ. ಇದೇ ವಿಚಾರವಾಗಿ ಕೊಹ್ಲಿಗೂ ಕೂಡ ಬಿಸಿಸಿಐ ಈ ರಿತಿಯ ತಪ್ಪುಗಳು ಇನ್ನೊಂದು ಸಾರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಗುರುವಾರ ಯೋ-ಯೋ ಟೆಸ್ಟ್‌ಗೆ ಒಳಗಾದ ಕೊಹ್ಲಿ, ತಮ್ಮ ಫೋಟೊವನ್ನು ಹಂಚಿಕೊಂಡು ತಾನು ಯೋ-ಯೋ ಟೆಸ್ಟ್​ನಲ್ಲಿ 17.2 ಅಂಕ ಪಡೆಯುವ ಮೂಲಕ ಈ ಫಿಟ್​ನೆಸ್​ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದೇನೆ(Virat Kohli passed the Yo-Yo Test) ಎಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಇದರಿಂದ ಬಿಸಿಸಿಐ ಅವರಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).

Exit mobile version