ಕೊಲೊಂಬೊ: 2023 ರ ಏಷ್ಯಾ ಕಪ್ನ ಬಹುನಿರೀಕ್ಷಿತ ಫೈನಲ್ ಪಂದ್ಯವು ಕೊಲಂಬೊದ ಆರ್ ಪ್ರೇಮದಾಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಿಂದ ಬೇರೆ ಕಡೆಗೆ ವರ್ಗಾವಣೆಯಾಗಲಿದೆ ಎಂಬುದಾಗಿ ವರದಿಯಾಗಿದೆ. ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ಸೆಪ್ಟೆಂಬರ್ 17 ರಂದು ರಾಜಧಾನಿಯಲ್ಲಿ ಹವಾಮಾನ ಮುನ್ಸೂಚನೆ ಭರವಸೆದಾಯಕವಾಗಿ ಕಾಣುತ್ತಿಲ್ಲ. ಜೋರು ಮಳೆ ಸುರಿಯುವ ಸಾಧ್ಯತೆಗಳಿವೆ. ಹೀಗಾಗಿ ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುವ ಚಿಂತನೆ ನಡೆಸಲಾಗಿದೆ.
ಪಲ್ಲೆಕೆಲೆ ಕ್ರೀಡಾಂಗಣವು ಮೂರು ಗುಂಪು ಹಂತದ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು, ಇದರಲ್ಲಿ ಸೆಪ್ಟೆಂಬರ್ 2 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿತ್ತು. ವಿಶೇಷವೆಂದರೆ, ಭಾರತವು ಮೊದಲ ಇನ್ನಿಂಗ್ಸ್ನಲ್ಲಿ 266 ರನ್ ಗಳಿಸಿದ ನಂತರ ಆಟವು ಮಳೆಯಿಂದಾಗಿ ರದ್ದಾಗಿತ್ತು. ಏತನ್ಮಧ್ಯೆ, ಪಲ್ಲೆಕೆಲೆ ಆತಿಥ್ಯ ವಹಿಸಿದ್ದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಪಂದ್ಯವು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಂಡಿತ್ತು. ಹೀಗಾಗಿ ಅಲ್ಲಿನ ಹವಮಾನ ಭರವಸೆದಾಯಕವಾಗಿರುವ ಕಾರಣ ಫೈನಲ್ ಪಂದ್ಯವನ್ನು ಶಿಫ್ಟ್ ಮಾಡಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ : Asia Cup 2023 : ಭಾರತದ ಬ್ಯಾಟರ್ಗಳನ್ನೇ ಬೆದರಿಸಿದ ಲಂಕಾದ 20 ವರ್ಷದ ಸ್ಪಿನ್ನರ್ ಯಾರು?
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಹೊರತಾಗಿಯೂ ನೇಪಾಳ ವಿರುದ್ಧದ ಭಾರತದ ಪಂದ್ಯವೂ ಮಳೆಯಿಂದ ತೊಂದರೆಗೆ ಒಳಗಾಗಿತ್ತು . ಆದಾಗ್ಯೂ, ಮೆನ್ ಇನ್ ಬ್ಲೂ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಹತ್ತು ವಿಕೆಟ್ಗಳಿಂದ ಗೆದ್ದಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಹಂತದ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು ಮತ್ತು ಅದನ್ನು ಮೀಸಲು ದಿನಕ್ಕೆ ಮುಂದುವರಿಸಲಾಗಿತ್ತು.
ಲಂಕಾ ವಿರುದ್ಧದ ಪಂದ್ಯಕ್ಕೂ ಮಳೆ
ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಸೂಪರ್ 4 ಹಂತದ ಪಂದ್ಯಕ್ಕೂ ಮಳೆಯ ಅಡಚಣೆ ಉಂಟಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 47 ಓವರ್ಗಳ ಬ್ಯಾಟಿಂಗ್ ಮುಗಿಸಿದ ತಕ್ಷಣ ಮಳೆ ಬಂದಿತ್ತು. ಹೀಗಾಗಿ ಸ್ವಲ್ಪ ಹೊತ್ತು ಬ್ರೇಕ್ ನೀಡಲಾಯಿತು. ಅಲ್ಲದೆ, ಪಂದ್ಯದ ನಂತರದ ವಿಶ್ರಾಂತಿ ಅವಧಿಯನ್ನು ಕಡಿತಗೊಳಿಸಲಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಲಂಕಾ ವಿರುದ್ಧ 213 ರನ್ಗಳಿಗೆ ಆಲ್ಔಟ್ ಆಗಿದೆ.
ಭಾರತ ತಂಡ ರೋಹಿತ್ ಶರ್ಮಾ (53 ರನ್) ಅರ್ಧ ಶತಕ ಹಾಗೂ ಶುಭ್ಮನ್ ಗಿಲ್ (19) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮೊದಲ ವಿಕೆಟ್ಗೆ 80 ರನ್ ಜತೆಯಾಟ ಪಡೆಯಿತು. ಆದರೆ, ಆ ಬಳಿಕ ಭಾರತದ ಬ್ಯಾಟಿಂಗ್ ವಿಭಾಗ ಏಕಾಏಕಿ ವೈಫಲ್ಯ ಕಂಡಿತು. ಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ (40 ರನ್ಗಳಿಗೆ 5 ವಿಕೆಟ್), ಚರಿತ್ ಅಸಲಂಕಾ (18 ರನ್ಗಳಿಗೆ 4 ವಿಕೆಟ್) ಅವರ ಮಾರಕ ದಾಳಿಗೆ ಸಿಲುಕಿ ನಲುಗಿತು.
ವಿರಾಟ್ ಕೊಹ್ಲಿ 3 ರನ್ಗಳಿಗೆ ಔಟಾದರೆ, ಇಶಾನ್ ಕಿಶನ್ (33) ಹಾಗೂ ಕೆ. ಎಲ್ ರಾಹುಲ್ (39) ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿದರು. ಆದರೆ, ಲಂಕಾದ ಸ್ಪಿನ್ನರ್ಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಸತತವಾಗಿ ವಿಕೆಟ್ಗಳನ್ನು ಕಳೆದಕೊಂಡು ಕನಿಷ್ಠ ಮೊತ್ತಕ್ಕೆ ಸರ್ವಪತನ ಕಂಡಿತು.
ಹಾರ್ದಿಕ್ ಪಾಂಡ್ಯ 5 ರನ್ ಬಾರಿಸಿದರೆ, ರವೀಂದ್ರ ಜಡೇಜಾ 4 ರನ್ಗಳಿಗೆ ಸೀಮಿತಗೊಂಡರು. ಅಕ್ಷರ್ ಪಟೇಲ್ ಕೊನೆ ವಿಕೆಟ್ ಆಗಿ ಔಟಾಗುವ ಮೊದಲು 26 ರನ್ಗಳ ಕೊಡುಗೆ ಕೊಟ್ಟರು. ಬುಮ್ರಾ 5 ರನ್, ಕುಲ್ದೀಪ್ ಯಾದವ್ ಶೂನ್ಯಕ್ಕೆ ಔಟಾದರು.