ಕರಾಚಿ: ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಏಷ್ಯಾ ಕಪ್ ಕ್ರಿಕೆಟ್(Asia Cup 2023) ಟೂರ್ನಿಗೆ ಸರಿಯಾಗಿ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಪಾಕಿಸ್ತಾನ ಈ ಟೂರ್ನಿಗೆ ತಂಡವನ್ನು ಪ್ರಕಟಿಸಿದೆ. ಆದರೆ ಪಾಕ್ನ ಬದ್ಧ ಎದುರಾಳಿ ಭಾರತ(IND vs PAK) ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಇದೇ ವಿಚಾರವಾಗಿ ಭಾರತ ತಂಡವನ್ನು ಪಾಕ್ ಮಾಜಿ ಆಟಗಾರರು ಲೇವಡಿ ಮಾಡಿದ್ದಾರೆ.
ಫಿಟ್ನೆಸ್ ಸಮಸ್ಯೆ
ಪಾಕ್ ತಂಡ ಮಾಜಿ ಆಟಗಾರ ಮತ್ತು ಕೋಚ್ ಆಗಿರುವ ಅಕಿಬ್ ಜಾವೆದ್(Aaqib Javed) “ಪಾಕಿಸ್ತಾನ ಸಮತೋಲಿತ ತಂಡವಾಗಿದೆ. ಜತೆಗೆ ತಮಡದಲ್ಲಿ ಯುವ ಆಟಗಾರರೆ ಹೆಚ್ಚಾಗಿ ತೊಂಬಿಕೊಂಡಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ದೊಡ್ಡ ದೊಡ್ಡ ಹೆಸರುಗಳು ಕಾಣಿಸಿದೆ. ಇದು ಕೇವಲ ಕಾಗದದ ಮೇಲೆ ಮಾತ್ರ. ಅವರ ಫಿಟ್ನೆಸ್ ಮತ್ತು ಫಾರ್ಮ್ ಅಷ್ಟು ಉತ್ತಮವಾಗಿಲ್ಲ, ಹೀಗಾಗಿ ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ಭಾರತ ತಂಡವನ್ನು ನಮ್ಮ ಆಟಗಾರರು ಬಗ್ಗು ಬಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡ ಜಾವೆದ್, ಏಕದಿನ ವಿಶ್ವಕಪ್(ICC World Cup) ಟೂರ್ನಿಯ ಇತಿಹಾಸದಲ್ಲಿ ಭಾರತ ವಿರುದ್ಧ ಪಾಕಿಸ್ತಾನ 7 ಬಾರಿ ಸೋಲು ಕಂಡಿದೆ. ಆದರೆ ಈ ಬಾರಿ ಇತಿಹಾಸ ಬದಲಾಗಲಿದೆ. ಏಕೆಂದರೆ ಪಾಕಿಸ್ತಾನ ತಂಡ ಭಾರತ ವಿರುದ್ಧ ಆಡುವಾಗ ಅನುಭವಿಸುತ್ತಿದ್ದ ಒತ್ತಡವನ್ನು ನಿವಾರಿಸಲು ಕಲಿತ್ತಿದ್ದಾರೆ. ಈಗಾಗಲೇ ಭಾರತವನ್ನು ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ನಲ್ಲಿ ಸೋಲಿಸಿರುವುದರಿಂದ ಈಬಾರಿ ಏಕದಿನದಲ್ಲಿಯೂ ಮಣಸಿಸುವ ಮೂಲಕ ಭಾರತದ ಅಜೇಯ ದಾಖಲೆಯನ್ನು ಮುರಿಯಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ Asia Cup 2023 : ಏಷ್ಯಾ ಕಪ್, ವಿಶ್ವ ಕಪ್ನಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ ಸ್ಟಾರ್ ಆಲ್ರೌಂಡರ್
ಭಾರತ ಇನ್ನೂ ಪ್ರಯೋಗ ನಡೆಸುತ್ತಿದೆ
ಪಾಕಿಸ್ತಾನ ತಂಡದ ಮತ್ತೊಬ್ಬ ಮಾಜಿ ಆಟಗಾರ ಸರ್ಫರಾಜ್ ನವಾಜ್(Sarfaraz Nawaz) ಕೂಡ ಭಾರತ ತಂಡವನ್ನು ಲೇವಡಿ ಮಾಡಿದ್ದು, ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ಗೆ ಹೆಚ್ಚಿನ ಸಮಯವಿಲ್ಲ, ಭಾರತ ಮಾತ್ರ ನಾಯಕರ ಬದಲಾವಣೆ ಅನೇಕ ಹೊಸ ಆಟಗಾರರ ಪ್ರಯೋಗವನ್ನು ನಡೆಸುತ್ತಲೇ ಇದೆ. ಸರಿಯಾದ ಸಂಯೋಜನೆಗಳಿಲ್ಲ. ಭಾರತೀಯ ತಂಡವನ್ನು ಅಭಿವೃದ್ಧಿಪಡಿಸುವ ಬದಲು ಅದು ನಾಶವಾಗುತ್ತಿದೆ ಎಂದು ಹೇಳಿದ್ದಾರೆ. ಜತೆಗೆ ಭಾರತದ ಮಧ್ಯಮ ಕ್ರಮಾಂಕ ಹೆಚ್ಚು ದುರ್ಬಲವಾಗಿದೆ ಆದರೆ, ಪಾಕ್ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ ಎಂದರು.
ಕ್ಯಾಂಡಿಯಲ್ಲಿ ಭಾರತ ಪಾಕ್ ಮುಖಾಮುಖಿ
ಏಷ್ಯಾಕಪ್ ಆಗಸ್ಟ್ 31ರಿಂದ ಸೆಪ್ಟಂಬರ್ 17ರ ತನಕ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸಾಂಪ್ರದಾಯಿಯ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್ ನಡುವಣ ಪಂದ್ಯ ಸೆಪ್ಟಂಬರ್ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ನಾಲ್ಕು ಪಂದ್ಯಗಳು ಪಾಕ್ನಲ್ಲಿ ನಡೆಸಿ ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ.