ಬೆಂಗಳೂರು: ನಾಲ್ಕು ದಿನಗಳ ಹಿಂದೆ ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿ (Asia Cup 2023) ಅಂತಿಮವಾಗಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಪಾಕಿಸ್ತಾನ ಮತ್ತೆ ತನ್ನ ಮೊಂಡು ವಾದವನ್ನು ಮುಂದಿಟ್ಟು ಹೊಸ ಕ್ಯಾತೆ ತೆಗೆದಿದೆ. ನಮಗೆ ನಾಲ್ಕು ಪಂದ್ಯ ಸಾಲದು ಎಂದು ಪಟ್ಟುಹಿಡಿದಿದೆ.
ಈಗಾಗಲೇ ಏಷ್ಯಾಕಪ್ ಟೂರ್ನಿಯ ದಿನಾಂಕ ಘೋಷಣೆಯಾಗಿ ಒಂದು ತಿಂಗಳು ಕಳೆದಿದೆ. ಈ ದಿನಾಂಕ ಪ್ರಕಟಗೊಂಡ ದಿನದಿಂದಲೂ ಪಾಕ್ ಒಂದಲ್ಲ ಒಂದು ವಿವಾರವಾಗಿ ಅಡ್ಡಗಾಲು ಇಡುತ್ತಲೇ ಬಂದಿದೆ. ಪಾಕ್ನ ಈ ತಗಾದೆಯಿಂದ ವೇಳಾಪಟ್ಟಿ ಪ್ರಕಟ ವಿಳಂಬವಾಗುತ್ತಿತ್ತು. ಆದರೆ ನಾಲ್ಕು ದಿನಗಳ ಹಿಂದೆ ವೇಳಾಪಟ್ಟಿ ಫೈನಲ್ ಆಗಿರುವ ಕುರಿತು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಮಾಹಿತಿ ನೀಡಿದ್ದರು. “ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯು ಅಂತಿಮವಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಪಿಸಿಬಿ ಮುಖ್ಯಸ್ಥ ಜಾಕಾ ಅಶ್ರಫ್ ಅವರು ಕಳೆದ ಗುರುವಾರ ನಡೆಸಿದ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಂಡಿದ್ದಾರೆ” ಎಂದು ಮಾಹಿತಿ ನೀಡಿದ್ದರು. ಜತೆಗೆ ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದ್ದರು.
ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯನ್ನು ಈ ಹಿಂದೆ ನಿಗದಿಪಡಿಸಿದ ಪ್ರಕಾರ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗುವುದಾಗಿ ತಿರ್ಮಾನಿಸಲಾಗಿತ್ತು. ಇದಕ್ಕೆ ಅಂದಿನ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ನಜೀಮ್ ಸೇಥಿ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ಪಾಕ್ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಝಾಕಾ ಅಶ್ರಫ್ (Zaka Ashraf) ಅವರು ಪಾಕ್ನಲ್ಲಿ ನಾಲ್ಕು ಪಂದ್ಯಗಳು ನಡೆಸುವುದಾದರೆ ಈ ಟೂರ್ನಿಯ ಅಗತ್ಯ ತಮಗಿಲ್ಲ, 4ಕ್ಕಿಂತ ಅಧಿಕ ಪಂದ್ಯ ನಡೆಸಿದರೇ ಮಾತ್ರ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ Asia Cup 2023 : ಏಷ್ಯಾ ಕಪ್‌ನಲ್ಲೂ ಆಡುವುದಿಲ್ಲ ಅಯ್ಯರ್, ರಾಹುಲ್ ಕತೆಯೂ ಗೊತ್ತಿಲ್ಲ!
ಝಾಕಾ ಅಶ್ರಫ್ (Zaka Ashraf) ಈ ನೂತನ ಬೇಡಿಕೆನ್ನು ಗಮನಿಸುವಾಗ ಟೂರ್ನಿ ನಡೆಯುವುದೇ ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಪಾಕಿಸ್ತಾನವನ್ನು ಬಿಟ್ಟು ಟೂರ್ನಿ ನಡೆಸಿದರೆ ಪಾಕ್ ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾದರೆ ಬಿಸಿಸಿಐ ಮತ್ತು ಐಸಿಸಿಯ ದೊಡ್ಡ ಮೊತ್ತದ ಯೋಜನೆಗೆ ಹಿನ್ನಡೆಯಾಗಲಿದೆ. ಏಕೆಂದರೆ ಭಾರತ ಮತ್ತು ಪಾಕ್ ಪಂದ್ಯ ಎಂದರೆ ಇದರಿಂದ ಎಲ್ಲ ಜಾಹಿರಾತು ಸೇರಿ ಕೆಲ ಉಧ್ಯಮಕ್ಕೆ ಅಪಾರ ಹಣ ಹರಿದುಬರುತ್ತದೆ. ಒಟ್ಟಾರೆ ಪಾಕ್ನ ಈ ನಡೆ ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ವಿಶ್ವಕಪ್ ಟೂರ್ನಿಯ ಹಿನ್ನೆಲೆಯಲ್ಲಿ ಈಗಾಗಲೇ ಭಾರತಕ್ಕೆ ಆಗಮಿಸಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಆದರೆ, ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲು ಪಿಸಿಬಿ ಮೊಂಡಾಟ ಪ್ರದರ್ಶಿಸುತ್ತಿದೆ. ಇದಕ್ಕಾಗಿ ಜಯ್ ಶಾ ಹಾಗೂ ಜಾಕಾ ಅಶ್ರಫ್ ಅವರು ಮತ್ತೆ ಅಕ್ಟೋಬರ್ 15ರಂದು ಮಾತುಕತೆ ನಡೆಸಲಿದ್ದಾರೆ.