ಮುಂಬಯಿ: ಭಾರತ ತಂಡದ ಭರವಸೆಯ ಆಟಗಾರ(Asia Cup 2023) ಎನಿಸಿಕೊಂಡಿದ್ದ ಶುಭಮನ್ ಗಿಲ್(Shubman Gill) ಅವರ ಬ್ಯಾಟಿಂಗ್ ಇದೀಗ ಮಂಕಾದಂತೆ ಕಾಣುತ್ತಿದೆ. ಐಪಿಎಲ್ ಬಳಿಕ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಅವರು ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಂತೂ ರನ್ ಗಳಿಸಲು ಸಂಪೂರ್ಣವಾಗಿ ಪರದಾಡಿದ್ದರು. ಅವರ ಈ ಬ್ಯಾಟಿಂಗ್ ವೈಫಲ್ಯಕ್ಕೆ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರು ಸೂಕ್ತ ಸಲಹೆಯೊಂದನ್ನು ನೀಡಿದ್ದಾರೆ.
ಧೈರ್ಯದಿಂದ ಬ್ಯಾಟಿಂಗ್ ನಡೆಸಬೇಕು
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಗೌತಮ್ ಗಂಭೀರ್, ಶುಭಮನ್ ಗಿಲ್ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣ ಧೈರ್ಯ ಕಳೆದುಕೊಂಡು ಬ್ಯಾಟಿಂಗ್ ನಡೆಸಿದ್ದಾರೆ. ಎಲ್ಲಿ ವಿಕೆಟ್ ಕೈಚೆಲ್ಲಿ ಹೋಗುತ್ತದೆಯೋ ಎಂಬ ಭಯದಲ್ಲೇ ಅವರು ಬ್ಯಾಟ್ ಬೀಸಿದ್ದನ್ನು ಕಾಣಬಹುದು. ಅದರಲ್ಲೂ ರೋಹಿತ್(Rohit Sharma) ಮತ್ತು ವಿರಾಟ್(Virat Kohli) ಅವರ ವಿಕೆಟ್ ಬೇಗನೆ ಪತನಗೊಂಡ ಬಳಿಕ ಗಿಲ್ ಅವರು ಒತ್ತಡಕ್ಕೆ ಸಿಲುಕಿದರು. ಆದ್ದರಿಂದ ಅವರು ನೈಜ ಆಕ್ರಮಣಕಾರಿ ಆಟ ಆಡಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಯಾವುದೇ ಒತ್ತಡವಿಲ್ಲದೆ ಆಡಿದರೆ ಅವರ ಹಿಂದಿನ ಬ್ಯಾಟಿಂಗ್ ಫಾರ್ಮ್ ಮತ್ತೆ ಕಾಣಸಿಗಲಿದೆ. ಹೀಗಾಗಿ ಗಿಲ್ ಯಾವುದೇ ಒತ್ತಡಕ್ಕೆ ಸಿಲುಕದೆ ಧೈರ್ಯದಿಂದ ಬ್ಯಾಟಿಂಗ್ ನಡೆಸಬೇಕು ಎಂದು ಗಂಭೀರ್ ಅವರು ಗಂಭೀರ ಸಲಹೆಯನ್ನು ನೀಡಿದ್ದಾರೆ.
ಪಾಕ್ ವಿರುದ್ಧ ಗಿಲ್ ಸಂಪೂರ್ಣ ವಿಫಲ
ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ ಅವರು ಹಿಂದೆಂದಿಗಿಂತಲೂ ಕೆಟ್ಟದಾಗಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಒಂದೊಂದು ರನ್ ಗಳಿಸಲು ಪರದಾಡಿದ್ದರು. 32 ಎಸೆತ ಎದುರಿಸಿ ಕೇವಲ 10 ರನ್ಗೆ ಸೀಮಿತರಾಗಿದ್ದರು. ಬಾರಿಸಿದ್ದು ಕೇವಲ ಒಂದು ಬೌಂಡರಿ. ಇದು ಕೂಡ 20 ಎಸೆತ ಎದುರಿಸಿ ಬಳಿಕ ದಾಖಲಾಯಿತು. ನೇಪಾಳ ವಿರುದ್ಧದ ಪಂದ್ಯದಲ್ಲಾದರೂ ಗಿಲ್ ಯಾವುದೇ ಒತ್ತಡಕ್ಕೆ ಸಿಲುಕದೆ ಬ್ಯಾಟ್ ಬೀಸಬೇಕು ಎನ್ನುವುದು ಗಂಭೀರ್ ಸೇರಿ ಅನೇಕ ಮಾಜಿ ಆಟಗಾರರ ಸಲಹೆಯಾಗಿದೆ.
ಇದನ್ನೂ ಓದಿ Asia Cup 2023 : ನೇಪಾಳ ವಿರುದ್ಧ ಪಂದ್ಯದ ವೇಳೆ ದಾಖಲೆ ಬರೆಯಲಿದ್ದಾರೆ ಮಾಜಿ ವೇಗಿ ಜಾವಗಲ್ ಶ್ರೀನಾಥ್!
ಪಂದ್ಯಕ್ಕೆ ಮಳೆ ಸಾಧ್ಯತೆ
ಸೋಮವಾರ ನಡೆಯುವ ಭಾರತ ಮತ್ತು ನೇಪಾಳ ವಿರುದ್ಧದ ಪಂದ್ಯಕ್ಕೂ ಮಳೆ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಶೇ.88 ರಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಭಾರತ ಎ ವಿಭಾಗದಿಂದ ಪಾಕ್ ಜತೆ ಸೂಪರ್-4 ಪ್ರವೇಶ ಪಡೆಯಲಿದೆ. ಏಕೆಂದರೆ ಪಾಕ್ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಭಾರತಕ್ಕೆ ಒಂದು ಅಂಕ ಲಭಿಸಿತ್ತು. ನೇಪಾಳ ಪಾಕ್ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯವೂ ಮಳೆಯಿಂದ ರದ್ದಾದರೆ ನೇಪಾಳಕ್ಕೆ ಒಂದು ಅಂಕ ಸಿಕ್ಕರೂ ಭಾರತ ಒಟ್ಟು ಅಂಕ 2 ಆಗಲಿದೆ. ಆಗ ಭಾರತ ಕೂಡ ಸೂಪರ್ 4 ಪ್ರವೇಶ ಪಡೆಯಲಿದೆ. ಇದು ಭಾರತ-ನೇಪಾಳ ನಡುವಿನ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನೇಪಾಳ : ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ಕೀಪರ್), ರೋಹಿತ್ ಪೌದೆಲ್ (ನಾಯ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಮಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜ್ಬನ್ಶಿ.