ದುಬೈ: ಏಷ್ಯಾ ಕಪ್ ಕ್ರಿಕೆಟ್(Asia Cup 2023) ಟೂರ್ನಿಯ ಆತಿಥ್ಯ ಪಾಕಿಸ್ಥಾನದಿಂದ ಕೈತಪ್ಪಲಿದೆ ಎಂದು ತಿಳಿದ ಕೂಡಲೇ ಇದೀಗ ಪಾಕ್ ಕ್ರಿಕೆಟ್ ಮಂಡಳಿ ಕೆಂಡಾಮಂಡಲವಾಗಿದೆ. ಒಂದೊಮ್ಮೆ ಪಾಕ್ ಕ್ರಿಕೆಟ್ ಮಂಡಳಿಯ ಪ್ರಸ್ತಾವನೆಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂಗೀಕರಿಸದಿದ್ದರೆ ಟೂರ್ನಿಯನ್ನು ಬಹಿಷ್ಕರಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ, ಏಷ್ಯಾ ಕಪ್ ಆತಿಥ್ಯ ಪಾಕಿಸ್ಥಾನದಿಂದ ಬಹುತೇಕ ಹೊರಬಿದ್ದಿದೆ, ಈ ಟೂರ್ನಿ ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಜಮ್ ಸೇಥಿ ಅವರು ಒಂದೊಮ್ಮೆ ನಮ್ಮ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿ ಶ್ರೀಲಂಕಾಕ್ಕೆ ಸ್ಥಳಾಂತರಿಸಿದರೆ ನಾವು ಟೂರ್ನಿಯನ್ನು ಬಹಿಷ್ಕರಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಈ ಬಾರಿಯ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭದ್ರತೆಯ ದೃಷ್ಟಿಯಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಬಿಸಿಸಿಐ ಆರಂಭದಿಂದಲೂ ಹೇಳುತ್ತಲೇ ಬಂದಿದೆ. ಇದೇ ವಿಚಾರವಾಗಿ ಪಾಕ್ ಮತ್ತು ಬಿಸಿಸಿಐ ಮಧ್ಯೆ ಮುಸುಕಿನ ಗುದ್ದಾಟವು ನಡೆದಿತ್ತು. ಪಾಕಿಸ್ತಾನಕ್ಕೆ ಭಾರತ ತಂಡ ಆಡಲು ಬಾರದಿದ್ದರೆ ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ನಲ್ಲಿ ಪಾಕ್ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ Asia Cup 2023 : ಪಾಕಿಸ್ತಾನದಲ್ಲಿ ನಡೆಯಲ್ಲ ಏಷ್ಯಾ ಕಪ್, ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ಜಯ!
ಈ ಮಧ್ಯೆ ಭಾರತದ ಪಂದ್ಯಗಳು ಪಾಕ್ನಿಂದ ಹೊರಗೆ ಮತ್ತು ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದೆ ಎಂಬ ಸುದ್ದಿಯೂ ಹರಡಿತ್ತು. ಆದರೆ ಕೆಲ ದಿನಗಳ ಹಿಂದೆ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಪಾಕ್ಸ್ತಾನದಿಂದ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಪಂದ್ಯಾವಳಿಯನ್ನು ಆಯೋಜಿಸಲು ಶ್ರೀಲಂಕಾ ಮತ್ತು ಬಾಂಗ್ಲಾದೇಶವೂ ಆಸಕ್ತಿ ತೋರಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಏಷ್ಯಾ ಕಪ್ ಆತಿಥ್ಯ ಕೈತಪ್ಪಿದರೆ ಟೂರ್ನಿಯಿಂದ ಪಾಕ್ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ. ಸದ್ಯ ಮುಂದಿನ ತಿಂಗಳು ನಡೆಯುವ ಎಸಿಸಿ ಸಭೆಯಲ್ಲಿ ಟೂರ್ನಿಯ ಬಗ್ಗೆ ಅಂತಿಮ ತೀರ್ಮಾನ ಪ್ರಕಟಗೊಳ್ಳಲಿದೆ.