ರಾವಲ್ಪಿಂಡಿ : ಭಾರತ ತಂಡವನ್ನು ಹೇಗಾದರೂ ಮಾಡಿ ಪಾಕಿಸ್ತಾನಕ್ಕೆ ಕರೆಸಿಕೊಂಡು ಹಠ ಸಾಧಿಸಿಕೊಳ್ಳಲು ಮುಂದಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಹಿನ್ನಡೆ ಅನುಭವಿಸುತ್ತಿದ್ದಾರೆ. ಹೀಗಾಗಿ ಆತಿಥ್ಯದ ಹಕ್ಕು ನಮಗೆ ಬೇಡ ಎಂಬ ಹೊಸ ವರಸೆ ಶುರುಮಾಡಿಕೊಂಡಿದ್ದಾರೆ.
ಏಷ್ಯಾ ಕಪ್ ೨೦೨೩ರ ಆತಿಥ್ಯ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಆದರೆ, ಟೂರ್ನಿ ಅಲ್ಲಿ ನಡೆಯುವುದಿಲ್ಲ. ಬದಲಾಗಿ ತಟಸ್ಥ ತಾಣದಲ್ಲಿ ಆಯೋಜಿಸಲಾಗುತ್ತದೆ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾಗಿರುವ ಜಯ್ ಶಾ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ಪಿಸಿಬಿ ನಿರಂತರ ಪ್ರತಿರೋಧ ವ್ಯಕ್ತಪಡಿಸಿಕೊಂಡು ಬರುತ್ತಿದೆ. ಮೊನ್ನೆಯವರೆಗೆ ಭಾರತ ತಂಡ ಪಾಕಿಸ್ತಾನಕ್ಕೆ ಬರದೇ ಹೋದರೆ, ಮುಂಬರುವ ವಿಶ್ವ ಕಪ್‌ಗೆ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂಬುದಾಗಿ ರಮೀಜ್ ರಾಜಾ ಹೇಳಿದ್ದರು. ಅದಕ್ಕೆ ಬಿಸಿಸಿಐ ಅಥವಾ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕ್ಯಾರೆ ಎನ್ನದ ಕಾರಣ ನಮಗೆ ಆತಿಥ್ಯದ ಹಕ್ಕು ಬೇಡ ಎಂಬುದಾಗಿ ರಮೀಜ್ ಹೇಳಲು ಆರಂಭಿಸಿದ್ದಾರೆ.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿದಸ ಇಎಸ್‌ಪಿಎನ್ ಕ್ರಿಕ್ ಇನ್ಪೋ ಜತೆ ಮಾತನಾಡಿದ ರಮೀಜ್ ರಾಜಾ ಅವರು “ಪಾಕಿಸ್ತಾನದಲ್ಲಿ ಟೂರ್ನಿಯನ್ನು ನಡೆಸಲು ಸಾಧ್ಯವಿಲ್ಲ ಎಂದಾದರೆ ಆತಿಥ್ಯದ ಹಕ್ಕನ್ನು ಇಟ್ಟುಕೊಂಡು ಏನು ಪ್ರಯೋಜನ. ನಾವು ಅದನ್ನು ವಾಪಸ್ ಕೊಡುತ್ತೇವೆ,”ಎಂಬುದಾಗಿ ಹೇಳಿದ್ದಾರೆ.
“ನಾವು ನ್ಯಾಯಯುತವಾಗಿ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದ್ದೇವೆ. ಭಾರತ ತಂಡ ಬರದೇ ಹೋದರೆ, ನಮ್ಮ ದೇಶದಿಂದ ಹೊರಕ್ಕೆ ನಡೆಸುವುದಾದರೆ ನಾವು ಹಕ್ಕನ್ನು ವಾಪಸ್ ನೀಡುತ್ತೇವೆ,” ಎಂಬುದಾಗಿ ರಮೀಜ್ ಹೇಳಿದ್ದಾರೆ.
ಇದನ್ನೂ ಓದಿ | Autobiography | ರಮೀಜ್ ರಾಜಾ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು, ಯಾಕೆಂದರೆ ಅವರಪ್ಪ ಪೊಲೀಸ್ ಕಮಿಷನರ್!