Site icon Vistara News

Asia Cup 2023: ಭಾರತ- ಪಾಕಿಸ್ತಾನ ಮೊದಲ ಪಂದ್ಯ ಇಂದು; ಮಳೆ ಆತಂಕ, ಪಂದ್ಯ ರದ್ದಾದರೆ ಯಾರಿಗೆ ಲಾಭ?

asia cup india pakistan

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಇಂದು ʼಏಷ್ಯಾ ಕಪ್ 2023ʼರ (Asia Cup 2023) ಪಂದ್ಯದಲ್ಲಿ ಎದುರಾಗಲಿವೆ. ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಮಳೆಯ ಕಾರ್ಮೋಡ ಕವಿದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎರಡೂ ತಂಡಗಳು (India- Pakistan cricket match) ಎದುರುಬದುರಾಗುತ್ತಿವೆ. 2019ರ ಬಳಿಕ ಎರಡೂ ತಂಡಗಳು ಪರಸ್ಪರ ಏಕದಿನ ಕ್ರಿಕೆಟ್‌ ಪಂದ್ಯ (India- Pakistan ODI) ಆಡಿಲ್ಲ. 2019ರ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ (ODI world cup cricket) ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಅಲ್ಲಿ ಭಾರತವು ಪಾಕಿಸ್ತಾನವನ್ನು 89 ರನ್‌ಗಳಿಂದ ಸೋಲಿಸಿತ್ತು. ಈ ಎರಡೂ ತಂಡಗಳು ಮುಖಾಮುಖಿಯಾದಾಗ ಪರಸ್ಪರ ದೇಶಗಳಲ್ಲಿ ಹೈ ವೋಲ್ಟೇಜ್‌ ಸಂಚರಿಸುವುದು ವಾಡಿಕೆ. ಎಲ್ಲ ಟಿಕೆಟ್‌ ಮಾರಾಟವಾಗಿ ಕ್ರೀಡಾಂಗಣ ತುಂಬಿರುತ್ತದೆ. ವಿವಾದಗಳೂ ಸೃಷ್ಟಿಯಾಗುತ್ತವೆ. ಅಭಿಮಾನದ ಜತೆಗೆ ತಿಕ್ಕಾಟವೂ ಉಂಟಾಗುತ್ತದೆ.

ಭಾರತ ಪೂರ್ಣ ಪ್ರಮಾಣದ ತಂಡದೊಂದಿಗೆ ಪಂದ್ಯಾವಳಿಯನ್ನು ಪ್ರವೇಶಿಸಿದೆ ಎಂಬುದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ವಿಶ್ವಾಸ. ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದಾರೆ. ಪಾಕಿಸ್ತಾನ ಈಗಾಗಲೇ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನು ಆಡಿದ್ದು, ಮುಲ್ತಾನ್‌ನಲ್ಲಿ ಬುಧವಾರ ನಡೆದ ಸ್ಪರ್ಧೆಯ ಆರಂಭಿಕ ಪಂದ್ಯದಲ್ಲಿ ನೇಪಾಳವನ್ನು 238 ರನ್‌ಗಳಿಂದ ಸೋಲಿಸಿದೆ. 343 ರನ್‌ಗಳ ಗುರಿಯನ್ನು ಪೇರಿಸಿ, ಪಾಕಿಸ್ತಾನವು ನೇಪಾಳವನ್ನು 23.4 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಮಾಡಿತು.

ಈ ಪಂದ್ಯವನ್ನು ಸದ್ಯ ಮಳೆಯ ಸಾಧ್ಯತೆ ಕಾಡುತ್ತಿದೆ. ಹವಾಮಾನ ವರದಿ ಈ ಆತಂಕ ಮೂಡಿಸಿದ್ದು, ಅಭಿಮಾನಿಗಳು ಮತ್ತು ಆಟಗಾರರು ಆತಂಕದಿಂದ ಆಕಾಶದ ಮೇಲೆ ಕಣ್ಣಿಟ್ಟಿದ್ದಾರೆ. ಹವಾಮಾನ ಇಲಾಖೆ ವೆಬ್‌ಸೈಟ್‌ಗಳ ಪ್ರಕಾರ ಶನಿವಾರ ಪಲ್ಲೆಕೆಲೆಯಲ್ಲಿ ಬೆಳಿಗ್ಗೆ ಶೇ.67ರಷ್ಟು ಮತ್ತು ಸಂಜೆ 94ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಜೋರಾಗಿ ಮಳೆ ಸುರಿದು ಪಂದ್ಯಾಟ ಸಾಧ್ಯವಾಗದೆ ಹೋದರೆ, ಭಾರತ ಮತ್ತು ಪಾಕಿಸ್ತಾನ ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ. ಆ ಮೂಲಕ ಪಾಕಿಸ್ತಾನ ಸೂಪರ್ ಫೋರ್ಸ್ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಮುಂದಿನ ಸುತ್ತಿಗೆ ಪ್ರವೇಶಿಸಲು ಭಾರತವು ನೇಪಾಳ ವಿರುದ್ಧ ಸೋಲನ್ನು ತಪ್ಪಿಸಬೇಕಾಗಿದೆ.

ಇಂದಿನ ಪೈಪೋಟಿಯಲ್ಲಿ ಎರಡೂ ಕಡೆಯವರು ಗೆಲುವು ಸಾಧಿಸುವ ಗುರಿಯನ್ನು ಹೊಂದಿದ್ದಾರೆ. ಎರಡೂ ಟೀಮ್‌ಗಳು ODIಗಳಲ್ಲಿ 136 ಬಾರಿ ಮುಖಾಮುಖಿಯಾಗಿವೆ. ಪಾಕಿಸ್ತಾನವು 73 ಸಲ ಗೆಲುವು ಕಂಡರೆ, ಭಾರತ 55 ಪಂದ್ಯಗಳಲ್ಲಿ ಗೆದ್ದಿದೆ.

ಇದನ್ನೂ ಓದಿ: Asia Cup 2023: ಭಾರತ-ಪಾಕ್​ ಏಷ್ಯಾಕಪ್ ಟೂರ್ನಿಯ​ ರೆಕಾರ್ಡ್​ ಹೀಗಿದೆ

Exit mobile version