ಬೆಂಗಳೂರು: ಬಹುನಿರೀಕ್ಷಿತ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯುವ ಏಷ್ಯಾಕಪ್ಗೆ(Asia Cup 2023) ಭಾರತ ತಂಡ(Team India) ಪ್ರಕಟಗೊಂಡಿದೆ. ಆದರೆ ಇದೀಗ ಪ್ಲೇಯಿಂಗ್ ಇಲೆವೆನ್ ಆಯ್ಕೆ ತುಸು ಜಟಿಲವಾಗಿದೆ. ಇದಕ್ಕೆ ಕಾರಣ ಘಟಾನುಘಟಿ ಆಟಗಾರರು ಕಾಣಿಸಿಕೊಂಡಿರುವುದ ಮತ್ತು ಸಂಪೂರ್ಣವಾಗಿ ಚೇತರಿಕೆ ಕಾಣದ ಕೆ.ಎಲ್. ರಾಹುಲ್ ಕೂಡ ತಂಡದಲ್ಲಿರುವುದು.
ಸೋಮವಾರ ಭಾರತ ಪುರುಷರ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು 17 ಸದಸ್ಯರ ತಂಡವನ್ನು ಪ್ರಕಟಿಸಿದರು. ಇದೇ ವೇಳೆ ಗಾಯದಿಂದ ಚೇತರಿಕೆ ಕಂಡ ಕೆ.ಎಲ್.ರಾಹುಲ್ ಅವರು ಆರಂಭಿಕ ಲೀಗ್ ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದಿದ್ದಾರೆ. ಇದರ ಜತೆಗೆ ಅಯ್ಯರ್ ಕೂಡ ದೀರ್ಘಕಾಲದ ಬಳಿಕ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಅವರನ್ನು ಕೂಡ ಪ್ಲೇಯಿಂಗ್ ಇಲೆವೆನ್ಗೆ ಪರಿಗಣಿಸಬೇಕೆ ಎಂಬ ಗೊಂದಲವೂ ಆಯ್ಕೆ ಸಮಿತಿಗೆ ಕಾಡಿದೆ.
ಆರಂಭಿಕ ಸ್ಥಾನಕ್ಕೆ ರೋಹಿತ್-ಗಿಲ್ ಫಿಕ್ಸ್
ಆರಂಭಿಕ ಸ್ಥಾನದ ಆಟಗಾರ ಆಯ್ಕೆಗೆ ಯಾವುದೇ ಗೊಂದಲವಿಲ್ಲ. ಈಗಾಗಲೇ ಯಶಸ್ಸು ಕಂಡಿರುವ ನಾಯಕ ರೋಹಿತ್ ಮತ್ತು ಯುವ ಆಟಗಾರ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಆದರೆ ನಾಲ್ಕನೇ ಕ್ರಮಾಂಕಕ್ಕೆ ಯಾರನ್ನು ಆಡಿಸುವುದು ಎಂದು ಸಣ್ಣ ಗೊಂದಲ ಉಂಟಾಗಿದೆ. ರಾಹುಲ್ ಫಿಟ್ ಆಗಿಲ್ಲ, ಅಯ್ಯರ್ ಅಥವಾ ಸೂರ್ಯಕುಮಾರ್ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗುವುದು ಖಚಿತ. ರಾಹುಲ್ ಇಲ್ಲದ ಕಾರಣ ಕೀಪರ್ ಆಗಿ ಮತ್ತು 5ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಆರನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಆಡುವುದು ಖಚಿತವಾಗಿದೆ.
ಬೌಲಿಂಗ್ ವಿಭಾಗದಲ್ಲಿ ಸಮಸ್ಯೆಯಿಲ್ಲ
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆಗಿ ಜಡೇಜಾ ಮತ್ತು ಕುಲ್ದೀಪ್ ಆಡಿದರೆ ವೇಗಗ ಬೌಲಿಂಗ್ ಕೋಟದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಆಡಲಿದ್ದಾರೆ. ಹೀಗಾಗಿ ಈ ವಿಭಾಗದಲ್ಲಿ ಸಮಸ್ಯೆ ಕಾಣುತ್ತಿಲ್ಲ. ಅಕ್ಷರ್ ಪಟೇಲ್ ತಂಡದಲ್ಲಿದ್ದರೂ ಆಲ್ರೌಂಡರ್ ಕೋಟ ಜಡೇಜಾ ಮತ್ತು ಪಾಂಡ್ಯ ಪಾಲಾಗಿದೆ. ಹೀಗಾಗಿ ಅಕ್ಷರ್ ಮತ್ತು ತಿಲಕ್ ವರ್ಮಾಗೆ ಅವಕಾಶ ಕಷ್ಟ.
ಇದನ್ನೂ ಓದಿ Asia Cup 2023: ಏಷ್ಯಾಕಪ್ಗೆ ಚಹಲ್ ಕಡೆಗಣನೆ; ಸ್ಪಷ್ಟನೆ ನೀಡಿದ ನಾಯಕ ರೋಹಿತ್ ಶರ್ಮ
ಭಾರತ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್(ವಿಕೆಟ್ ಕೀಪರ್).
ಏಷ್ಯಾಕಪ್ ಟೂರ್ನಿ ಆಗಸ್ಟ್ 30 ರಿಂದ ಆರಂಭವಾಗಲಿದೆ. ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಸೆಪ್ಟಂಬರ್ 2 ರಂದು ಲಂಕಾದ ಕ್ಯಾಂಡಿಯಲ್ಲಿ ಸೆಣಸಾಟ ನಡೆಸಲಿದೆ.