ಮುಂಬಯಿ: 2023ರ ಏಷ್ಯಾಕಪ್ ಆತಿಥ್ಯ ವಿಚಾರದಲ್ಲಿ ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಸೂಚಿಸಿದ ಹೈಬ್ರಿಡ್ ಮಾದರಿಯನ್ನು ಭಾರತ ಮತ್ತು ಇತರ ಸದಸ್ಯರು ತಿರಸ್ಕರಿಸಿದ್ದಾರೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಹೈಬ್ರಿಡ್ ಮಾದರಿಯಲ್ಲಿ 4 ಅಥವಾ 5 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡುವುದು ಮತ್ತು ಭಾರತದ ಎಲ್ಲಾ ಪಂದ್ಯಗಳು ಸೇರಿದಂತೆ ಉಳಿದ ಪಂದ್ಯಗಳನ್ನು ದುಬೈನಲ್ಲಿ ಆಡುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಯೋಜನೆಯಾಗಿದೆ. ಆದರೆ, ಈ ಯೋಜನೆಯನ್ನು ಎಸಿಸಿ ತಿರಸ್ಕರಿಸಿದೆ. ಹೀಗಾಗಿ ಪಾಕಿಸ್ತಾನ ತನ್ನ ಹಠಮಾರಿತನ ಮುಂದುವರಿಸಿದರೆ ಆ ತಂಡವನ್ನೇ ಹೊರಗಿಟ್ಟು ಟೂರ್ನಿ ನಡೆಸುವುದು ಎಸಿಸಿ ಮುಂದಿನ ಯೋಜನೆಯಾಗಿದೆ.
ಅಹ್ಮದಾಬಾದ್ನಲ್ಲಿ ನಡೆಸಿದ್ದ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ನಡೆಸಲಾದ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಪಂದ್ಯಾವಳಿಯನ್ನು ಒಂದು ರಾಷ್ಟ್ರದಲ್ಲಿ ಮಾತ್ರ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಗೊಂಡಿದ್ದವು. ಪಾಕಿಸ್ತಾನ ಅದಕ್ಕೆ ಒಪ್ಪದಿದ್ದರೆ ಶ್ರೀಲಂಕಾದಲ್ಲಿ ನಡೆಸುವುದು ಯೋಜನೆಯಾಗಿದೆ. ಇದೇ ವೇಳೆ ಪಾಕಿಸ್ತಾನ ಸೂಚಿಸಿರುವ ಹೈಬ್ರಿಡ್ ಮಾದರಿ ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸೆಪ್ಟೆಂಬರ್ನಲ್ಲಿ ಯುಎಇನಲ್ಲಿ ಅತಿಯಾದ ಉಷ್ಣಾಂಶ ಇರುವ ಕಾರಣ ಆಡುವುದು ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ. ಜಯ್ ಶಾ ಅವರು ಈ ಅಭಿಪ್ರಾಯವನ್ನು ಮಂಡಿಸಿದ್ದು ಉಳಿದ ದೇಶಗಳು ಅದಕ್ಕೆ ಸಮ್ಮತಿ ಸೂಚಿಸಿವೆ.
ಟೆಲಿಗ್ರಾಫ್ ಮಾಡಿರುವ ವರದಿಯ ಪ್ರಕಾರ, ಭಾಗವಹಿಸುವ ಇತರ ಎಲ್ಲಾ ರಾಷ್ಟ್ರಗಳು ಶ್ರೀಲಂಕಾದಲ್ಲಿ ಆಡಲು ಒಪ್ಪಿಕೊಂಡಿವೆ. ಈ ಮಾಹಿತಿಯನ್ನು ಎಸಿಸಿಯ ಮುಂದಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸಲು ಯೋಜನೆ ರೂಪಿಸಲಾಗಿದೆ. ಈ ವರ್ಷ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ಆತಿಥ್ಯ ವಹಿಸಲಿರುವ ಪಿಸಿಬಿ, ಸಮರ್ಥ ಯೋಜನೆ ರೂಪಿಸಲು ವಿಫಲಗೊಂಡಿದೆ.
ಐದನೇ ತಂಡ ಯಾವುದು?
ಒಂದು ವೇಳೆ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಿಂದ ಹಿಂದೆ ಸರಿದರೆ, ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಮಾತ್ರ ಪಟ್ಟಿಯಲ್ಲಿ ಉಳಿಯಲಿವೆ. ಹೀಗಾಗಿ ಐದನೇ ತಂಡ ಸೇರಿಸುವ ಬಗ್ಗೆ ಯೋಜನೆ ರೂಪುಗೊಳ್ಳಲಿದೆ. ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಬಿಸಿಸಿಐ ನಿರಾಕರಿಸಿರುವುದು ಮತ್ತು ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿರುವುದು ಕ್ರಿಕೆಟ್ ಕ್ಷೇತ್ರದಲ್ಲಿ ತೀವ್ರ ಪರಿಣಾಮ ಬೀರಬಹುದು. ಏಕೆಂದರೆ ಭಾರತವು ಅಕ್ಟೋಬರ್-ನವೆಂಬರ್ನಲ್ಲಿ 2023ರ ಏಕದಿನ ವಿಶ್ವ ಕಪ್ಗೆ ಆತಿಥ್ಯ ವಹಿಸಲಿದೆ. ಪ್ರತೀಕಾರವಾಗಿ ಪಾಕಿಸ್ತಾನವು ಭಾರತಕ್ಕೆ ಪ್ರವಾಸ ಮಾಡಲು ನಿರಾಕರಿಸಬಹುದು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜೆಫ್ ಅಲ್ಲಾರ್ಡೈಸ್ ಪ್ರಸ್ತುತ ಲಾಹೋರ್ನಲ್ಲಿದ್ದಾರೆ. ಅವರು ವಿಶ್ವಕಪ್ನಲ್ಲಿ ಭಾಗವಹಿಸಲು ಪಾಕಿಸ್ತಾನದಿಂದ ಭರವಸೆ ಕೋರಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಅವರ ತಂಡ ಭಾಗವಹಿಸುವುದು ಅಲ್ಲಿನ ಸರ್ಕಾರದ ಅನುಮತಿಗೆ ಒಳಪಟ್ಟಿರುತ್ತದೆ ಎಂದು ಪಿಸಿಬಿ ತಿಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : Asia Cup 2023: ಏಷ್ಯಾ ಕಪ್ ಆತಿಥ್ಯ ಕೈ ತಪ್ಪಿದರೆ ಟೂರ್ನಿಗೆ ಬಹಿಷ್ಕಾರ; ಪಾಕ್ ಎಚ್ಚರಿಕೆ
ಏಷ್ಯಾಕಪ್ಗಾಗಿ ಭಾರತ ಪಾಕಿಸ್ತಾನ ಪ್ರವಾಸ ಕೈಗೊಳ್ಳದಿದ್ದರೂ ನಮ್ಮ ಸರಕಾರ ಒಪ್ಪಿಗೆ ನೀಡಿದರೆ ತಂಡವನ್ನು ಭಾರತಕ್ಕೆ ಕಳುಹಿಸುತ್ತೇವೆ ಎಂದು ಎಂದು ನಜಾಮ್ ಸೇಥಿ ಈ ತಿಂಗಳ ಆರಂಭದಲ್ಲಿ ದಿ ಟೆಲಿಗ್ರಾಫ್ಗೆ ತಿಳಿಸಿದ್ದರು.
ಏಷ್ಯಾ ಕಪ್ಗೆ ಪಿಸಿಬಿ ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಲು ಪ್ರಮುಖ ಕಾರಣವೆಂದರೆ, ಈ ಪಂದ್ಯಾವಳಿಯನ್ನು ಈ ಮಾದರಿಯಲ್ಲಿ ಆಡಿದರೆ, ಪಾಕಿಸ್ತಾನ ತಂಡ ವಿಶ್ವ ಕಪ್ನಲ್ಲಿಯೂ ಅದೇ ರೀತಿ ಮಾಡಬೇಕೆಂದು ಒತ್ತಾಯಿಸಬಹುದು ಎಂಬ ಊಹೆಯ ಮೇಲೆ. ಭಾರತವು ಪಾಕಿಸ್ತಾನಕ್ಕೆ ಪ್ರವಾಸ ಮಾಡದೇ ತಟಸ್ಥ ಸ್ಥಳದಲ್ಲಿ ತನ್ನ ಪಂದ್ಯಗಳನ್ನು ಆಡಲು ಬಯಸಿದರೆ, ಪಾಕಿಸ್ತಾನವು ವಿಶ್ವಕಪ್ ಸಮಯದಲ್ಲಿ ಅದೇ ಮಾದರಿಯನ್ನು ಕೇಳಬಹುದು ಶ್ರೀಲಂಕಾ ಅಥವಾ ಬಾಂಗ್ಲಾದೇಶದಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸಲು ಐಸಿಸಿಯನ್ನು ಕೇಳುವ ಸಾಧ್ಯತೆಗಳಿವೆ.
ಪಾಕಿಸ್ತಾನವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಬಯಸಿದರೆ ಬಿಸಿಸಿಐ ಒಪ್ಪುವುದಿಲ್ಲ. ಭಾರತದಲ್ಲಿ ಆಟವಾಡಿ ಇಲ್ಲದೇ ಹೋದರೆ ಬೇರೆ ಅವಕಾಶಗಳು ಇಲ್ಲ ಎಂದು ಬಿಸಿಸಿಐ ತನ್ನ ನಿಲುವು ಹೇಳಿದೆ. ಮುಂದಿನ ವಾರ ಲಂಡನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವ ಕಪ್ನ ವೇಳಾಪಟ್ಟಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.