ಬೆಂಗಳೂರು: ಪಾಕಿಸ್ತಾನದ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಏಷ್ಯಾ ಕಪ್(Asia Cup 2023) ವೇಳೆ ಗಾಯಾಳಾಗಿ ತಂಡದಿಂದ ಹೊರಗುಳಿದಿದ್ದ ಪ್ರಮುಖ ಆಟಗಾರರು ಭಾರತ ತಂಡ ಸೇರಲಿದ್ದಾರೆ ಎಂದು ನಿರೀಕ್ಷೆಯೊಂದನ್ನು ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಇದೀಗ ಹುಸಿಗೊಳ್ಳುವ ಸಾಧ್ಯತೆಯೊಂದು ದಟ್ಟವಾಗಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ ಐಪಿಎಲ್ ವೇಳೆ ಕಾಲಿನ ಸ್ನಾಯು ಸೆಳೆತದ ಸಮಸ್ಯೆಗೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಏಷ್ಯಾಕಪ್ ವೇಳೆಗೆ ಪೂರ್ಣ ಫಿಟ್ ಆಗುವುದು ಅನುಮಾನ ಎಂದು ಹೇಳಿದೆ. “ರಾಹುಲ್ ಅವರು ಚೇತರಿಕೆ ಕಂಡಿದ್ದರೂ ಸಂಪೂರ್ಣ ಫಿಟ್ ಆಗಲು ಇನ್ನೂ ಕೆಲವು ದಿನಗಳು ಬೇಕಾಗಿದೆ. ಫಿಟ್‌ನೆಸ್ ಅಭ್ಯಾಸದ ವೇಳೆ ಅವರು ನೋವು ಅನುಭವಿಸುತ್ತಿದ್ದಾರೆ. ಹೀಗಾಗಿ ಅವರು ಬಹುತೇಕ ಏಷ್ಯಾ ಕಪ್ನಿಂದ ಹೊರಗುಳಿಯಲಿದ್ದಾರೆ” ಎಂದು ವರದಿ ಮಾಡಿದೆ. ಪ್ರಸ್ತುತ ರಾಹುಲ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದಾರೆ.
ಗಾಯದ ಕಾರಣದಿಂದ ಹಲವು ಸಮಯದಿಂದ ಭಾರತದ ತಂಡದಿಂದ ಹೊರಗಿರುವ ವೇಗಿ ಜಸ್ಪ್ರೀತ್ ಬುಮ್ರಾ(jasprit bumrah) ಅವರು ಮತ್ತೆ ತಂಡಕ್ಕೆ ಮರಳಲು ವೇದಿಕೆ ಸಜ್ಜಾಗಿದೆ. ಈ ವರ್ಷದ ಆಗಸ್ಟ್ ನಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಸೇರಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಅವರು ಆಡುವ ಕುರಿತು ಇನ್ನೂ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ.
ಇದನ್ನೂ ಓದಿ KL Rahul: ತೊಡೆ ಶಸ್ತ್ರಚಿಕಿತ್ಸೆ ಬಳಿಕ ಮರಳಿದ ಕೆ.ಎಲ್ ರಾಹುಲ್, ಫಿಟ್‌ನೆಸ್ ಗಳಿಸಲು ಎನ್‌ಸಿಎ ಸೇರ್ಪಡೆ
ಕಳೆದ ವರ್ಷ ಬುಮ್ರಾ ಅವರಿಗೆ ಗಂಭೀರವಾದ ಬೆನ್ನಿನ ಗಾಯವಾಗಿತ್ತು. ಹೀಗಾಗಿ ಅವರು ಟಿ20 ವಿಶ್ವಕಪ್ 2022, ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಿಂದ ದೂರ ಉಳಿದಿದ್ದರು. ಸದ್ಯ ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಕಂಡಂತೆ ತೋರುತ್ತಿದೆ. ಸಂಪೂರ್ಣ ಫಿಟ್ ಆದರೆ ಐರ್ಲೆಂಡ್ ವಿರುದ್ದದ ಟಿ20 ಸರಣಿ ಆಡಲಿದ್ದಾರೆ. ಈ ಸರಣಿಯ ವೇಳಾಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ.