Site icon Vistara News

Asia Cup 2023: ಪಂದ್ಯ ಆರಂಭಕ್ಕೆ ಒಂದು ದಿನ ಇರುವಾಗ ಬಾಂಗ್ಲಾ ತಂಡಕ್ಕೆ ಆಘಾತ; ಸ್ಟಾರ್​ ಆಟಗಾರ ಟೂರ್ನಿಯಿಂದ ಔಟ್​

Bangladeshi cricketer Bangladeshi cricketer

ಢಾಕಾ: ಏಕದಿನ ಮಾದರಿಯ ಏಷ್ಯಾಕಪ್ ಕ್ರಿಕೆಟ್​ ಟೂರ್ನಿ(Asia cup 2023( ಇಂದು(ಬುಧವಾರ) ಆರಂಭಗೊಂಡಿದೆ. ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಸೆಣಸಾಡಲಿವೆ. ಆದರೆ ಬಾಂಗ್ಲಾದೇಶ ತಂಡಕ್ಕೆ ಗಾಯದ ಬರೆ ಬಿದ್ದಿದೆ. ಗುರುವಾರ ಶ್ರೀಲಂಕಾ ವಿರುದ್ಧ ಪಂದ್ಯವನ್ನಾಡು ಸಜ್ಜಾಗುತ್ತಿದ್ದ ಮಧ್ಯೆ ತಂಡದ ಸ್ಟಾರ್​ ಆಟಗಾರ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅನುಭವಿ ಆಟಗಾರ ​ಲಿಟನ್‌ ದಾಸ್‌(Litton Das) ಅವರು ಜ್ವರದಿಂದ ಚೇತರಿಕೆ ಕಾಣದ ಹಿನ್ನೆಲೆ ಅವರನ್ನು ಟೂರ್ನಿಯಿಂದ ಕೈಬಿಡಲಾಗಿದೆ.

“ವೈರಲ್ ಜ್ವರದಿಂದ(viral fever) ಬಳಲುತ್ತಿದ್ದ ಲಿಟನ್​ ದಾಸ್​ ಅವರು ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ. ಹೀಗಾಗಿ ಅವರು ಏಷ್ಯಾಕಪ್​ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಅವರ ಅಲಭ್ಯತೆ ತಂಡಕ್ಕೆ ಆಘಾತ ತಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ನಾವು ಮಾನಸಿಕವಾಗಿ ದೃಢವಾಗಿದ್ದೇವೆ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಏಕದಿನ ವಿಶ್ವಕಪ್​ಗೆ ಸಿದ್ಧತೆ ನಡೆಸಲಿದ್ದೇವೆ” ಎಂದು ಬಾಂಗ್ಲಾ ಕ್ರಿಕೆಟ್​ ಮಂಡಳಿ ತಿಳಿಸಿದೆ.

ಅನಾಮುಲ್ ಹಕ್ ಬಿಜಾಯ್​ ಬದಲಿ ಆಟಗಾರ

ಲಿಟನ್‌ ದಾಸ್‌ ಬದಲಿಗೆ 30 ವರ್ಷದ ವಿಕೆಟ್‌ಕೀಪರ್‌ ಕಮ್​ ಬ್ಯಾಟರ್​ ಅನಾಮುಲ್ ಹಕ್ ಬಿಜಾಯ್(Anamul Haque)​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಿಜಾಯ್‌ ಬಾಂಗ್ಲಾ ಪರ 44 ಏಕದಿನ ಪಂದ್ಯಗಳನ್ನು ಆಡಿದ್ದು, ಒಟ್ಟಾರೆ 1254 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ದಾಖಲಾಗಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ವಿರುದ್ಧ ಕೊನೆಯದಾಗಿ ಏಕದಿನ ಪಂದ್ಯವನ್ನಾಡಿದ್ದರು.

“ಅನಾಮುಲ್‌ ಹಕ್‌ ಈಗಾಗಲೇ ಬಾಂಗ್ಲಾ ಪರ ಆಟಡಿದ ಅನುಭವ ಹೊಂದಿದ್ದಾರೆ. ಜತೆಗೆ ರನ್​ ಗಳಿಕೆಯಲ್ಲಿಯೂ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಲಿಟನ್‌ ದಾಸ್‌ ಅಲಭ್ಯತೆಯಿಂದ ನಮಗೆ ಅಗ್ರ ಕ್ರಮಾಂಕದ ಬ್ಯಾಟರ್‌ನ ಅಗತ್ಯವಿತ್ತು. ಜತೆಗೆ ವಿಕೆಟ್‌ ಕೀಪಿಂಗ್‌ ಕೂಡ ಮುಖ್ಯವಾಗಿತ್ತು. ಹೀಗಾಗಿ ಅನಾಮುಲ್ ಹಕ್‌ ಅವರನ್ನು ಆಯ್ಕೆ ಮಾಡಿದೆವು” ಎಂದು ಬಾಂಗ್ಲಾ ಕ್ರಿಕೆಟ್‌ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ Asia Cup 2023: ಏಷ್ಯಾಕಪ್​ ಟೂರ್ನಿಯ 6 ತಂಡಗಳ ಸಂಪೂರ್ಣ ಪಟ್ಟಿ

6 ವರ್ಷಗಳ ಬಳಿಕ ಶಕೀಬ್​ ನಾಯಕ

ತಮಿಮ್‌ ಇಕ್ಬಾಲ್‌, ಇಬಾದತ್‌ ಹುಸೇನ್‌ ಗಾಯದಿಂದ ಹೊರಬಿದ್ದಿರುವುದು ಕೂಡ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಲಿದೆ. ಸೀನಿಯರ್‌ ಕ್ರಿಕೆಟಿಗ ಶಕಿಬ್‌ ಅಲ್‌ ಹಸನ್‌ 6 ವರ್ಷಗಳ ಬಳಿಕ ಬಾಂಗ್ಲಾ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಬಾಂಗ್ಲಾದೇಶ ಪರಿಷ್ಕೃತ ತಂಡ

ಶಾಕಿಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್ ಬಿಜಾಯ್, ನಜ್ಮುಲ್ ಹೊಸೈನ್ ಶಾಂಟೊ, ತೌಹೀದ್ ಹೃದಯೋಯ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್ ಧ್ರುಬೋ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರಹಮಾನ್, ಶೋರ್ಫುಲ್ ಇಸ್ಲಾಂ, ಶಾರ್ಫುಲ್ ಇಸ್ಲಾಂ, ನಸುಮ್. ನಯೀಮ್ ಶೇಖ್, ಶಮೀಮ್ ಹುಸೇನ್, ತಂಜೀದ್ ಹಸನ್ ತಮೀಮ್, ತಂಜಿಮ್ ಹಸನ್ ಸಾಕಿಬ್.

Exit mobile version