Site icon Vistara News

Asia Cup 2023: ಬಾಂಗ್ಲಾ ಪಂದ್ಯಕ್ಕೆ ಭಾರತ ತಂಡದಲ್ಲಿ ಹಲವು ಬದಲಾವಣೆ

team india cricket players

ಕೊಲಂಬೊ: ಇಂದು ನಡೆಯುವ ಏಷ್ಯಾಕಪ್​ನ(Asia Cup 2023) ಅಂತಿಮ ಸೂಪರ್​ 4 ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ(India vs Bangladesh, Super Fours) ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಫೈನಲ್​ ತಲುಪಿರುವ ಭಾರತಕ್ಕೆ ಇದು ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಈ ಪಂದ್ಯದಲ್ಲಿ ಭಾರತ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ತಂಡದಲ್ಲಿ ಕನಿಷ್ಠ 4 ಮಂದಿ ಆಟಗಾರರ ಬದಲಾವಣೆ ಮಾಡುವ ಸಾಧ್ಯತೆ ಅಧಿಕವಾಗಿದೆ.

ಈ ಪಂದ್ಯಕ್ಕೆ ಪ್ರಸಿದ್ಧ್​ ಕೃಷ್ಣ, ತಿಲಕ್​ ವರ್ಮ, ಸೂರ್ಯಕುಮಾರ್​ ಯಾದವ್​ ಮತ್ತು ಬೆನ್ನು ನೋವಿನಿಂದ ಚೇತರಿಕೆ ಕಂಡಿರುವ ಶ್ರೇಯಸ್​ ಅಯ್ಯರ್​ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಏಕೆಂದರೆ ಒಂದು ಕಡೆ ಭಾರತ ಫೈನಲ್ ಪ್ರವೇಶಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸತತ ಪಂದ್ಯವನ್ನಾಡಿತ್ತು. ಹೀಗಾಗಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕವಾಗಿದೆ. ನಾಯಕ ರೋಹಿತ್​, ವಿರಾಟ್​ ಕೊಹ್ಲಿ ಜಸ್​ಪ್ರೀತ್​ ಬುಮ್ರಾ ಮತ್ತು ಜಡೇಜಾ ಅವರು ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಹವಾಮಾನ ವರದಿ

ಈ ಪಂದ್ಯಕ್ಕೂ ಮಳೆಯ ಭೀತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಮಳೆಯಿಂದ ಪಂದ್ಯ ರದ್ದಾದರು. ಭಾರತಕ್ಕೆ ಯಾವುದೇ ಆತಂಕವಿಲ್ಲ. ಏಕೆಂದರೆ ರೋಹಿತ್​ ಪಡೆ ಈಗಾಗಲೇ ಫೈನಲ್​ ಟಿಕೆಟ್​ ಪಡೆದಿದೆ. ಅತ್ತ ಬಾಂಗ್ಲಾದೇಶ ಆಡಿದ ಎರಡು ಪಂದ್ಯಗಳನ್ನು ಸೋತಿರುವ ಕಾರಣ ಈ ಪಂದ್ಯದಲ್ಲಿ ಗೆದ್ದರೂ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಮಳೆ ಬಂದರೂ ಉಭಯ ತಂಡಕ್ಕೆ ಯಾವುದೇ ನಷ್ಟ ಸಂಭವಿಸದು.

ಇದನ್ನೂ ಓದಿ Asia Cup 2023 : ಪಾಕ್ ತಂಡವನ್ನು​ ಸದೆಬಡಿದು ಏಷ್ಯಾ ಕಪ್​ ಫೈನಲ್​ಗೇರಿದ ಶ್ರೀಲಂಕಾ ತಂಡ

​ಪಿಚ್​ ರಿಪೋರ್ಟ್​

ಆರ್​. ಪ್ರೇಮದಾಸ(R.Premadasa Stadium, Colombo) ಕ್ರೀಡಾಂಗಣದ ಪಿಚ್​ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇದು ಸಂಪೂರ್ಣ ಸ್ಪಿನ್​ ಪಿಚ್​ ಆಗಿದೆ. ಇದಕ್ಕೆ ಇಲ್ಲಿ ನಡೆದ ಕಳೆದ ಪಂದ್ಯಗಳೇ ಉತ್ತಮ ನಿದರ್ಶನ. ಭಾರತ ವಿರುದ್ಧದ ಪಂದ್ಯದಲ್ಲಿ ಲಂಕಾ ಸ್ಪಿನ್ನರ್​ಗಳು ಎಲ್ಲ ಹತ್ತು ವಿಕೆಟ್​ ಕಿತ್ತು ಪ್ರಾಬಲ್ಯ ಸಾಧಿಸಿದ್ದರು. ಅಲ್ಲದೆ ಕುಲ್​ದೀಪ್​ ಯಾದವ್​ ಇಲ್ಲಿ ಆಡಿದ ಕಳೆದ 2 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್​ ಕೆಡವಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಸ್ಪಿನ್ನರ್​ಗಳೇ ಹಿಡಿತ ಸಾಧಿಸುವುದರಲ್ಲಿ ಅನುಮಾನವೇ ಬೇಡ.

ಏಷ್ಯಾಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ 14 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಸರ್ವಾಧಿಕ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಬಾಂಗ್ಲಾ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ ಈ ಗೆಲುವು 2012ರಲ್ಲಿ ಒಲಿದಿತ್ತು. ಈ ಬಾರಿಯೂ ಭಾರತವೇ ನೆಚ್ಚಿನ ತಂಡವಾಗಿದೆ. ಏಷ್ಯಾಕಪ್​ನ ಅತ್ಯಧಿಕ ಆತಿಥ್ಯ ವಹಿಸಿಕೊಂಡಿರುವ ಬಾಂಗ್ಲಾ ಒಂದು ಬಾರಿಯೂ ಟ್ರೋಫಿ ಗೆಲ್ಲದಿರುವುದು ವಿಪರಾಸ್ಯವೇ ಸರಿ.

ತಂಡಗಳು

ಬಾಂಗ್ಲಾದೇಶ: ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ತೌಹೀದ್ ಹೃದಯೋಯ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್ ಧ್ರುಬೋ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರಹಮಾನ್, ಶೋರ್ಫುಲ್ ಇಸ್ಲಾಂ, ಶಾರ್ಫುಲ್ ಇಸ್ಲಾಂ, ನಸುಮ್. ನಯೀಮ್ ಶೇಖ್, ಶಮೀಮ್ ಹುಸೇನ್, ತಂಜೀದ್ ಹಸನ್ ತಮೀಮ್, ತಂಜಿಮ್ ಹಸನ್ ಸಾಕಿಬ್.

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ.

Exit mobile version