Site icon Vistara News

Asia Cup 2023 : ಏಷ್ಯಾ ಕಪ್ ಆಡುವ ನೇಪಾಳ ಕ್ರಿಕೆಟ್​ ತಂಡಕ್ಕೂ ರೋಹಿತ್ ನಾಯಕ!

Nepal cricket team

ಕಠ್ಮಂಡು: ಹಲವಾರು ಅಡೆತಡೆಗಳ ನಡುವೆಯೂ ನೇಪಾಳ ಕ್ರಿಕೆಟ್ ತಂಡ ಆಗಸ್ಟ್ 30ರಿಂದ ಮುಲ್ತಾನ್ ನಲ್ಲಿ ಪ್ರಾರಂಭವಾಗಲಿರುವ ಮುಂಬರುವ ಏಷ್ಯಾ ಕಪ್ ಕ್ರಿಕೆಟ್​ ಟೂರ್ನಿಗೆ ಅರ್ಹತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕ್ರಿಕೆಟ್​ ಸಂಸ್ಥೆಯ ಆಯ್ಕೆದಾದರರ 17 ಸದಸ್ಯರ ತಂಡವನ್ನು ಸೋಮವಾರ ಪ್ರಕಟಿಸಿದೆ. ಈ ತಂಡವು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ತೆರಳಿ ಸಿದ್ಧತೆ ಆರಂಭಿಸಲಿದೆ. ಈ ತಂಡಕ್ಕೆ ರೋಹಿತ್ ಪೌದೆಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತ ತಂಡಕ್ಕೂ ರೋಹಿತ್ ಶರ್ಮಾ ನಾಯಕರಾಗಿರುವುದು ಇಲ್ಲಿನ ಅಚ್ಚರಿಯಾಗಿದೆ. ಪೌದೆಲ್​ ನಾಯಕತ್ವದಲ್ಲಿ ನೇಪಾಳ ತಂಡ ತನ್ನ ಮೊದಲ ಏಷ್ಯಾ ಕಪ್ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ. ತಂಡದ ಮೇಲೆ ಸಾಕಷ್ಟು ಒತ್ತಡವಿದೆ. ಯಾಕೆಂದರೆ ಲೀಗ್ ಹಂತದಲ್ಲಿ ಪಾಕಿಸ್ತಾನ ಮತ್ತು ಭಾರತದಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಎಮರ್ಜಿಂಗ್ ಏಷ್ಯಾ ಕಪ್​ನಲ್ಲಿ ಈ ತಂಡವು ನಿರೀಕ್ಷೆಯಂತೆ ಪ್ರದರ್ಶನ ನೀಡಲು ವಿಫಲಗೊಂಡಿತ್ತು . ಅವರು ಪಾಕಿಸ್ತಾನ ಎ ಮತ್ತು ಭಾರತ ಎ ವಿರುದ್ಧ ಸೋತಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಅವರ ಪ್ರದರ್ಶನವು ತುಂಬಾ ಕಳಪೆಯಾಗಿತ್ತು. ಆದ್ದರಿಂದ ಏಷ್ಯಾ ಕಪ್​ನಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶವಿದೆ.

ಲಾಮಿಚಾನೆಗೆ ಮಿಂಚುವ ಅವಕಾಶ

ನೇಪಾಳ ತಂಡದಲ್ಲಿ ಅವಕಾಶ ಪಡೆದಿರುವ ಸ್ಪಿನ್ ಮಾಂತ್ರಿಕ ಸಂದೀಪ್ ಲಾಮಿಚಾನೆ ಮತ್ತು ಲಲಿತ್ ರಾಜ್​​ಬನ್ಸಿಗೆ ಪಂದ್ಯಾವಳಿಯಲ್ಲಿ ಹೆಚ್ಚು ಮಿಂಚುವ ಅವಕಾಶವಿದೆ. ಲಾಮಿಚಾನೆ ವಿಶೇಷವಾಗಿ ವಿಶ್ವದಾದ್ಯಂತ ಸಾಕಷ್ಟು ಫ್ರ್ಯಾಂಚೈಸಿ ಕ್ರಿಕೆಟ್ ಆಡಿದ್ದಾರೆ. ದೀರ್ಘಕಾಲದ ಅನುಭವ ಹೊಂದಿದ್ದಾರೆ. ಇದು ಅವರಿಗೆ ಹೆಚ್ಚು ನೆರವಾಗಬಹುದು. ಅವರು 49 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು 111 ವಿಕೆಟ್​​ಗಳನ್ನು ಪಡೆದಿದ್ದಾರೆ. ಹೀಗಾಗಿ, ಚೆಂಡು ತಿರುವು ಪಡೆಯುವ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಬ್ಯಾಟಿಂಗ್ ವಿಷಯಕ್ಕೆ ಬಂದರೆ ನೇಪಾಳ ತಂಡ ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ ಅವರ ಮೇಲೆ ಅವಲಂಬಿತವಾಗಿದೆ. ನಾಯಕ ರೋಹಿತ್ ಕೂಡ ತಂಡಕ್ಕೆ ಅತ್ಯಗತ್ಯ. ರಾಷ್ಟ್ರೀಯ ತಂಡದ ಪರ 52 ಏಕದಿನ ಪಂದ್ಯಗಳನ್ನು ಆಡಿರುವ 20ರ ಹರೆಯದ ರೋಹಿತ್​ 1469 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಆಲ್​ರೌಂಡರ್​ಗಳಾದ ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ ಮತ್ತು ಪ್ರತಿಸ್ ಜಿ ಮೆಗಾ ಪಂದ್ಯಾವಳಿಯಲ್ಲಿ ತಂಡಕ್ಕೆ ಪ್ರಮುಖರೆನಿಸಿಕೊಂಡಿದ್ದಾರೆ. ಅವರಿಗೆ ಅನುಭವದ ಕೊರತೆಯಿದ್ದರೂ, ತಂಡವು ಅಗತ್ಯವಿರುವ ಆಟಗಾರರನ್ನು ಹೊಂದಿದೆ.

ಏಷ್ಯಾ ಕಪ್ 2023 ಗೆ ನೇಪಾಳ ತಂಡ: ರೋಹಿತ್ ಪೌಡೆಲ್ (ನಾಯಕ), ಆಸಿಫ್ ಶೇಖ್, ಕುಸಾಲ್ ಭುರ್ಟೆಲ್, ಲಲಿತ್ ರಾಜ್ಬನ್ಶಿ, ಭೀಮ್ ಶಾರ್ಕಿ, ಕುಶಾಲ್ ಮಲ್ಲಾ, ಡಿ.ಎಸ್.ಐರಿ, ಸಂದೀಪ್ ಲಾಮಿಚಾನೆ, ಕರಣ್ ಕೆ.ಸಿ, ಗುಲ್ಶನ್ ಝಾ, ಆರಿಫ್ ಶೇಖ್, ಸೋಮಪಾಲ್ ಕಾಮಿ, ಪ್ರತಿಸ್ ಜಿ.ಸಿ, ಕಿಶೋರ್ ಮಹತೋ, ಸಂದೀಪ್ ಜೋರಾ, ಅರ್ಜುನ್ ಸೌದ್, ಶ್ಯಾಮ್ ಧಾಕಲ್.

Exit mobile version