Site icon Vistara News

Asia Cup 2023: ಭಾರತಕ್ಕೆ ಸಡ್ಡು ಹೊಡೆಯಲು ಬಲಿಷ್ಠ ತಂಡ ಪ್ರಕಟಿಸಿದ ಪಾಕ್​

pakistan team

ಕರಾಚಿ: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡ ಕೆಲವೇ ನಿಮಿಷಗಳಲ್ಲಿ ಪಾಕಿಸ್ತಾನ ಏಷ್ಯಾಕಪ್​ಗೆ(Asia Cup 2023) 18 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.(Asia Cup 2023 Pakistan squad) ಏಷ್ಯಾಕಪ್​ ಆಗಸ್ಟ್​ 31ರಿಂದ ಸೆಪ್ಟಂಬರ್​ 17ರ ತನಕ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್​ ಮಾದರಿಯಲ್ಲಿ ನಡೆಯಲಿದೆ. ಸಾಂಪ್ರದಾಯಿಯ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್​ ನಡುವಣ ಪಂದ್ಯ ಸೆಪ್ಟಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ.

ಈ ಮಹತ್ವದ ಟೂರ್ನಿಗೆ ಸೋಮವಾರವಷ್ಟೇ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್‌ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಮಾಜಿ ನಾಯಕನೂ ಆಗಿರುವ ಇಂಝಮಾಮ್‌ ಉಲ್‌ ಹಕ್‌(Inzamam-ul-Haq) ಅವರು ತಂಡವನ್ನು ಪ್ರಕಟಿಸಿದರು. ಜತೆಗೆ ಟೂರ್ನಿಯಲ್ಲಿ ಗೆಲ್ಲುವ ಎಲ್ಲ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಈ ತಂಡ ಏಷ್ಯಾಕಪ್​ ಮತ್ತು ಅಫಘಾನಿಸ್ತಾನ ವಿರುದ್ಧದ ಸರಣಿಗೂ ಅನ್ವಯವಾಗಲಿದೆ. ಆದರೆ ಈ ಅಫ್ಘಾನ್​​ ಸರಣಿಯಲ್ಲಿ ಅವಕಾಶ ಪಡೆದ ಸೌದ್ ಶಕೀಲ್ ಅವರು ಏಷ್ಯಾಕಪ್​ ತಂಡದಿಂದ ಹೊರಗಿಳಿಯಲಿದ್ದಾರೆ. ಅಲ್ಲಿ 17 ಸದಸ್ಯರು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.

ಎರಡು ವರ್ಷಗಳ ಬಳಿಕ ತಂಡಕ್ಕೆ ಮರಳಿದ ಅಶ್ರಫ್

ಈ ತಂಡದಲ್ಲಿ ಸ್ಥಾನ ಪಡೆದ ಫಹೀಮ್ ಅಶ್ರಫ್ ಎರಡು ವರ್ಷಗಳ ನಂತರ ಏಕದಿನ ತಂಡಕ್ಕೆ ಮರಳಿದ್ದಾರೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಪಾಕ್​ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಗಾಯ ಮತ್ತು ಫಿಟ್​ನೆಸ್​ ಸಮಸ್ಯೆಯಿಂದ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದರು. ಫಹೀಮ್ ಅವರು ಆಲ್​ರೌಂಡರ್​ ಆಗಿದ್ದು ವೇಗದ ಬೌಲಿಂಗ್ ಜತೆಗೆ ಬ್ಯಾಟಿಂಗ್​ ಕೂಡ ಮಾಡಬಲ್ಲರು.

ಅಶ್ರಫ್​ ಆಯ್ಕೆ ಸಮರ್ಥಿಸಿಕೊಂಡ ಇಂಝಮಾಮ್‌

ಎರಡು ವರ್ಷಗಳ ಬಳಿಕ ತಂಡಕ್ಕೆ ಮರಳಿದ ಫಹೀಮ್ ಅಶ್ರಫ್ ಆಯ್ಕೆಯನ್ನು ಆಯ್ಕೆ ಸಮಿತಿ ಮುಖ್ಯಸ್ಥ ಇಂಝಮಾಮ್‌ ಉಲ್‌ ಹಕ್‌ ಸಮರ್ಥಿಸಿಕೊಂಡಿದ್ದಾರೆ. “ತಂಡಕ್ಕೆ ವೇಗದ ಬೌಲಿಂಗ್ ಆಲ್​ರೌಂಡರ್​ ಅಗತ್ಯವಿರುವುದರಿಂದ ಅಶ್ರಫ್​ಗೆ ಆಧ್ಯತೆ ನೀಡಲಾಗಿದೆ. ಏಷ್ಯಾಕಪ್​ನಲ್ಲಿ ಆಡುವುದರೊಂದಿಗೆ ಏಕದಿನ ವಿಶ್ವಕಪ್‌ನಲ್ಲೂ ಅವರ ಸೇವೆ ಲಭ್ಯವಾಗಲಿದೆ” ಎಂದು ತಿಳಿಸಿದರು.

ಇದನ್ನೂ ಓದಿ Asia Cup 2023: ಏಷ್ಯಾಕಪ್​ ಪಂದ್ಯಗಳ ಸಮಯ ನಿಗದಿಪಡಿಸಿದ ಏಷ್ಯನ್ ಕೌನ್ಸಿಲ್

ಪಾಕಿಸ್ತಾನ ತಂಡ

ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರಾವುಫ್​, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್.

Exit mobile version