ಕೊಲಂಬೊ: ಭಾನುವಾರ ನಡೆಯುವ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ನ(Asia Cup 2023) ಸೂಪರ್-4 ಪಂದ್ಯದಲ್ಲಿ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ(ravindra jadeja) ದಾಖಲೆಯೊಂದನ್ನು ಬರೆಯುವ ಸುವರ್ಣಾವಕಾಶವಿದೆ. ಒಂದು ವಿಕೆಟ್ ಪಡೆದ ಇರ್ಫಾನ್ ಪಠಾಣ್(irfan pathan) ಅವರ ಏಷ್ಯಾಕಪ್ ದಾಖಲೆಯೊಂದು ಪತನಗೊಳ್ಳಲಿದೆ.
ಈಗಾಗಲೇ ಸಕ್ರೀಯವಾಗಿ ಏಷ್ಯಾಕಪ್ ಆಡುತ್ತಿರುವ ಬೌಲರ್ಗಳ ಪಟ್ಟಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ರವೀಂದ್ರ ಜಡೇಜಾ ಹೆಸರಿನಲ್ಲಿದೆ. ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಸದ್ಯ ಜಡೇಜಾ 22* ವಿಕೆಟ್ ಪಡೆದಿದ್ದಾರೆ. ಜಡೇಜಾ ಬಳಿಕ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಕಾಣಿಸಿಕೊಂಡಿದ್ದಾರೆ. ಅಫಘಾನಿಸ್ತಾನ ತಂಡದ ಸ್ಪಿನ್ನರ್ ರಶೀದ್ ಖಾನ್ 12 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಒಂದೊಮ್ಮೆ ಪಾಕಿಸ್ತಾನ ವಿರುದ್ಧ ಜಡೇಜಾ ಮೂರು ವಿಕೆಟ್ ಪಡೆದರೆ 200 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ 7ನೇ ಭಾರತೀಯ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಭಾರತ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಕುಂಬ್ಳೆ 337 ವಿಕೆಟ್ ಕೆಡವಿದ್ದಾರೆ. 315 ವಿಕೆಟ್ ಕಿತ್ತ ಜಾವಗಲ್ ಶ್ರೀನಾಥ್ ದ್ವಿತೀಯ ಸ್ಥಾನ, ಪ್ರಸ್ತುತ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಅಜಿತ್ ಅಗರ್ಕರ್ 288 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನ; ಹಿಡಿ ಶಾಪ ಹಾಕಿದ ವೆಂಕಟೇಶ್ ಪ್ರಸಾದ್
ಚಮಿಂಡಾ ವಾಸ್ ದಾಖಲೆ ಮೇಲೆ ಕಣ್ಣು
ಏಷ್ಯಾಕಪ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 24 ಪಂದ್ಯ ಆಡಿ 30 ವಿಕೆಟ್ ಕೆಡವಿದ್ದಾರೆ. ದ್ವಿತೀಯ ಸ್ಥಾನ ಯಾರ್ಕರ್ ಕಿಂಗ್ ಲಸೀತ್ ಮಾಲಿಂಗ ಕಾಣಿಸಿಕೊಂಡಿದ್ದಾರೆ. ಮಾಲಿಂಗ 29 ವಿಕೆಟ್ ಪಡೆದಿದ್ದಾರೆ. ಲಂಕಾದ ಮತ್ತೊಬ್ಬ ಆಟಗಾರ ಅಜಂತಾ ಮೆಂಡಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 26 ವಿಕೆಟ್ ಪಡೆದಿದ್ದಾರೆ. ಜಡೇಜಾ ಇನ್ನೆರಡು ವಿಕೆಟ್ ಪಡೆದರೆ 5ನೇ ಸ್ಥಾನದಲ್ಲಿರುವ ಚಮಿಂಡಾ ವಾಸ್(23 ವಿಕೆಟ್) ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಪಂದ್ಯ ನಡೆಯುವುದೇ ಅನುಮಾನ
ಕೊಲಂಬೊದಲ್ಲಿ ನಡೆಯುವ ಪಂದ್ಯಗಳಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಲ್ಲೂ ಭಾರತ ಮತ್ತು ಪಾಕ್ ನಡುವೆ ಭಾನುವಾರ(ಸೆಪ್ಟೆಂಬರ್ 10) ನಡೆಯುವ ಪಂದ್ಯಕ್ಕೆ ಬೆಳಗ್ಗಿನಿಂದಲೇ ಇಲ್ಲಿ ಶೇ.90ರಷ್ಟು ಮಳೆಯಾಗಲಿದೆ ಇದೆ ಎಂದು ಮುನ್ಸೂಚನೆ ನೀಡಿದೆ. ಇದೇ ಕಾರಣಕ್ಕೆ ಈ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ. ಒಂದೊಮ್ಮೆ ಮೀಸಲು ದಿನ ಕೂಡ ಮಳೆಯಿಂದ ರದ್ದುಗೊಂಡರೆ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕೆ.ಎಲ್ ರಾಹುಲ್(ವಿಕೆಟ್ ಕೀಪರ್).
ಪಾಕಿಸ್ತಾನ: ಫಖಾರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.