ಕ್ಯಾಂಡಿ: ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ವಿರುದ್ಧದ ಏಷ್ಯಾಕಪ್(Asia Cup 2023) ಪಂದ್ಯ ಸೆಪ್ಟೆಂಬರ್ 2ರಂದು ನಡೆಯಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನವೇ ಉಭಯ ತಂಡಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮಾಡಲಾಗಿದೆ. ಅದರಲ್ಲೂ ಪಾಕ್ ತಂಡ ನೇಪಾಳ ವಿರುದ್ಧ ತೋರಿದ ಪ್ರದರ್ಶನದ ಮೇಲೆ ಕೆಲ ಕ್ರಿಕೆಟ್ ಪಂಡಿತರು ಯಾವ ತಂಡ ಗೆಲ್ಲಲಿದೆ ಎಂಬ ಭವಿಷ್ಯವನ್ನೂ ನುಡಿಯಲಾರಂಭಿಸಿದ್ದಾರೆ. ಆದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಪಾಕ್ ಕಟ್ಟಿಹಾಕಲು ರಣತಂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಇದರ ಸುಳಿವನ್ನು ಕೂಡ ಅವರು ಬಿಟ್ಟುಕೊಟ್ಟಿದ್ದಾರೆ.
ಬುಧವಾರ ಟೀಮ್ ಇಂಡಿಯಾ ಆಟಗಾರರು ಶ್ರೀಲಂಕಾ ತಲುಪಿದ್ದಾರೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್ ಶರ್ಮ, ಏಷ್ಯಾಕಪ್ನಲ್ಲಿ ನಮ್ಮ ತಂಡದ ಆಟಗಾರರು ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆನ್ನು ಗಮನಿಸುವಾಗ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ರಣತಂತ್ರವೊಂದನ್ನು ರೂಪಿಸಿದ ಹಾಗಿದೆ. ರೋಹಿತ್ ಅವರು ಭಾರತದ ಇನಿಂಗ್ಸ್ ಆರಂಭಿಸುವುದು ಕೂಡ ಅನುಮಾನ ಎನಿಸಿದೆ.
ಇಶಾನ್ ಕಿಶನ್ ಆರಂಭಿಕ ಆಟಗಾರ
ರಾಹುಲ್ ಅವರು ಈ ಪಂದ್ಯದಿಂದ ಹೊರಗುಳಿದ ಕಾರಣ ಅವರ ಸ್ಥಾನಕ್ಕೆ ಇಶಾನ್ ಕಿಶನ್ ಅವರು ಆಯ್ಕೆಯಾಗಿದ್ದಾರೆ. ಎಡಗೈ ಆರಂಭಿಕ ಆಟಗಾರನಾದ ಕಾರಣ ಅವರನ್ನು ಈ ಸ್ಥಾನದಲ್ಲೇ ಕಣಕ್ಕಿಳಿಸಲು ರೋಹಿತ್ ಯೋಚಿಸಿದ್ದಾರೆ ಎನ್ನಲಾಗಿದೆ. ರೋಹಿತ್ ಅವರ ಈ ಮಾಸ್ಟರ್ ಪ್ಲ್ಯಾನ್ ಹಿಂದೆ ಒಂದು ಕಾರಣವೂ ಅಡಗಿದೆ. ಪಾಕ್ ಎಡಗೈ ವೇಗಿ ಶಾಹೀನ್ ಅಫ್ರಿದಿ ಅವರು ಹೊಸ ಚೆಂಡಿನಲ್ಲಿ ಪವರ್ ಪ್ಲೇನಲ್ಲಿ ಉತ್ತಮ ಹಿಡಿ ಸಾಧಿಸುತ್ತಾರೆ. ಎರಡೂ ಬದಿಯಲ್ಲಿಯೂ ಸ್ವಿಂಗ್ ಮಾಡುವ ಮೂಲಕ ಅದರಲ್ಲೂ ಬಲಗೈ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಾಣುತ್ತಾರೆ. ಇದನ್ನು ಈ ಹಿಂದೆಯೂ ನಾವು ಕಂಡಿದ್ದೇವೆ. ರೋಹಿತ್ ಮತ್ತು ರಾಹುಲ್ ಅವರು ಇನಿಂಗ್ಸ್ ಆರಂಭಿಸಿ ಸಂದರ್ಭ ಉಭಯ ಆಟಗಾರರ ವಿಕೆಟನ್ನು ಮೊದಲ ಓವರ್ನಲ್ಲಿಯೇ ಕಿತ್ತಿದ್ದರು. ಆದರೆ ಅವರು ಚೆಂಡಿನ ಹೊಳಪು ಕಳೆದಂತೆ ತಮ್ಮ ಲಯವನ್ನು ಕಳೆದುಕೊಳ್ಳುತ್ತಾರೆ. ಜತೆಗೆ ಎಡಗೈ ಬ್ಯಾಟರ್ ಕ್ರೀಸ್ನಲ್ಲಿದ್ದರೆ ಅವರ ಯೋಜನೆ ತಪ್ಪುತ್ತದೆ. ಇದೇ ಕಾರಣಕ್ಕೆ ಇಶಾನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವುದು ರೋಹಿತ್ ಅವರ ಯೋಜನೆಯಾಗಿದೆ.
ಇದನ್ನೂ ಓದಿ Asia Cup 2023: ಬುಮ್ರಾ vs ಬಾಬರ್, ಕೊಹ್ಲಿ vs ಯಾರು? ಭಾರತ-ಪಾಕ್ ಪಂದ್ಯ ಇದಕ್ಕೇ ಹೈವೋಲ್ಟೇಜ್
ರೋಹಿತ್ ಅವರ ಕ್ರಮಾಂಕವೇನು?
ಗಿಲ್ ಮತ್ತು ಇಶಾನ್ ಆರಂಭಿಕನಾಗಿ ಆಟಡಿದರೆ ರೋಹಿತ್ ಅವರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಳ್ಳುವುದು ಸಹಜ. ಇದಕ್ಕೂ ಉತ್ತರವಿದೆ. ರೋಹಿತ್ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಯೋಜನೆ ರೂಪಿಸಿಕೊಂಡಂತಿದೆ. ಆಗ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂದಲ್ಲಿ ಆಡಲಿದ್ದಾರೆ. ಕೊಹ್ಲಿ ಈ ಹಿಂದೆಯೂ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಹಲವು ಸಾಧನೆ ಮಾಡಿದ್ದಾರೆ. ಅಲ್ಲದೆ ತಂಡಕ್ಕೆ ಆಧಾರವಾಗಿ ನಿಂತು ಇನಿಂಗ್ಸ್ ಕಟ್ಟುವಲ್ಲಿಯೂ ಅವರು ನಿಪುಣರು. ಹೀಗಾಗಿ ಕೊಹ್ಲಿ 4ನೇ ಕ್ರಮಾಖದಲ್ಲಿ ಆಡುವ ಸಾಧ್ಯತೆ ಅಧಿಕ. ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತ ಮಾಸ್ಟ್ ಪ್ಲ್ಯಾನ್ ರೂಪಿಸಿದ್ದಂತು ನಿಜ.