ಕೊಲೊಂಬೊ: ಏಷ್ಯಾಕಪ್ ಟೂರ್ನಿಯಲ್ಲಿ(Asia Cup 2023) ಪಾಲ್ಗೊಳ್ಳಲು ಟೀಮ್ ಇಂಡಿಯಾ ಆಟಗಾರರು(Team India Cricket) ಬುಧವಾರ ಶ್ರೀಲಂಕಾ ತಲುಪಿದ್ದಾರೆ. ರೋಹಿತ್ ಶರ್ಮ ಪಡೆ ಮೊದಲ ಪಂದ್ಯವನ್ನು ಬದ್ಧ ಎದುರಾಳಿ ಪಾಕಿಸ್ತಾನ(IND vs PAK) ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ಆಟಗಾರರು ಕೊಲೊಂಬೊ ವಿಮಾನ ನಿಲ್ದಾಣ ತಲುಪಿದ ವಿಡಿಯೊ ಮತ್ತು ಫೋಟೊಗಳನ್ನು ನೆಟ್ಟಿಗರೊಬ್ಬರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಕಾಣಿಸಿಕೋಂಡಿದ್ದಾರೆ. ಇಂದು ವಿಶ್ರಾಂತಿ ಪಡೆಯಲಿರುವ ಆಟಗಾರರು ಗುರುವಾರದಿಂದ ಕ್ಯಾಂಡಿಯಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ.
ಎರಡು ಪಂದ್ಯಗಳಿಗೆ ರಾಹುಲ್ ಗೈರು
ಕನ್ನಡಿಗ ಕೆ.ಎಲ್ ರಾಹುಲ್ ಅವರು ಗಾಯದ ಸಮಸ್ಯೆಯಿಂದ ಪೂರ್ತಿಯಾಗಿ ಚೇತರಿಸಿಕೊಳ್ಳದ ಕಾರಣ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಈ ವಿಚಾರವನ್ನು ಮಂಗಳವಾರ ಕೋಚ್ ರಾಹುಲ್ ದ್ರಾವಿಡ್ ತಂಡ ಶ್ರೀಲಂಕಾಕ್ಕೆ ತೆರಳುವ ಮೊದಲು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಐಪಿಎಲ್ ಸಮಯದಲ್ಲಿ ಗಾಯಾಳಾಗಿದ್ದ ಕೆ.ಎಲ್. ರಾಹುಲ್, ಏಷ್ಯಾ ಕಪ್ ತಂಡದ ಆಯ್ಕೆಯ ವೇಳೆಯೂ ಚೇತರಿಸಿಕೊಂಡಿರಲಿಲ್ಲ. ಆದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದೇ ವೇಳೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ರಾಹುಲ್ ಪೂರ್ತಿ ಫಿಟ್‌ನೆಸ್ ಹೊಂದಿದರಷ್ಟೇ ತಂಡದೊಂದಿಗೆ ತೆರಳಲಿದ್ದಾರೆ ಎಂದು ತಿಳಿಸಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್ ಅವರನ್ನು ಮೀಸಲು ಆಟಗಾರನನ್ನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಐಪಿಎಲ್ ವೇಳೆ ತೊಡೆಯ ಸ್ನಾಯು ಸೆಳೆತಕ್ಕೆ ಸಿಲುಕಿದ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ Asia Cup 2023: ಪ್ರಯಾಣ,ಸತತ ಪಂದ್ಯ; ಅಸಮಾಧಾನ ಹೊರಹಾಕಿದ ಪಾಕ್ ನಾಯಕ
ಪಂದ್ಯಕ್ಕೆ ಮಳೆಯ ಎಚ್ಚರಿಕೆ
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಇದು ಭಾರತಕ್ಕೆ ಈ ಕೂಟದ ಮೊದಲ ಪಂದ್ಯವಾದರೆ, ಪಾಕ್ಗೆ ಎರಡನೇ ಪಂದ್ಯ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಅಭಿಮಾನಿಗಳ ಈ ಆಸೆಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹೌದು ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).