Site icon Vistara News

Asia Cup 2023: ಏಷ್ಯಾಕಪ್​ಗೆ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ

virat kohli practice

ಬೆಂಗಳೂರು: ಬಹುನಿರೀಕ್ಷಿತ ಏಷ್ಯಾಕಪ್(Asia Cup 2023)​ ಆಗಸ್ಟ್‌ 30ರಿಂದ ಆರಂಭಗೊಳ್ಳಲಿದೆ. ಸೋಮವಾರ ತಂಡ(asia cup 2023 india squad) ಪ್ರಕಟಗೊಳಿಸಿದ ಬಳಿಕ ಟೀಮ್​ ಇಂಡಿಯಾ ಆಟಗಾರರು ಬುಧವಾರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(NCA)ಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿಂಡೀಸ್ ವಿರುದ್ಧದ ಏಕದಿನ ಸರಣಿ ಬಳಿಕ ವಿಶ್ರಾಂತಿಯಲ್ಲಿದ್ದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ(virat kohli), ರವೀಂದ್ರ ಜಡೇಜಾ ಸೇರಿದಂತೆ ಪ್ರಮುಖರು ಅಭ್ಯಾಸ ಆರಂಭಿಸಿದ್ದಾರೆ. ಜಡೇಜಾ(Ravindra Jadeja) ಅವರು ರನ್ನಿಂಗ್​ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಸದ್ಯ ಐರ್ಲೆಂಡ್‌ ವಿರುದ್ಧ ಟಿ20 ಸರಣಿ ಆಡುತ್ತಿರುವ ಜಸ್‌ಪ್ರೀತ್‌ ಬುಮ್ರಾ, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ ಈ ಸರಣಿ ಮುಗಿದ ಬಳಿಕ ಶಿಬಿರಕ್ಕೆ ಹಾಜರಾಗಲಿದ್ದಾರೆ. ಬುಮ್ರಾ ಸಾರಥ್ಯದ ಭಾರತ ತಂಡ ಐರ್ಲೆಂಡ್​ ವಿರುದ್ಧ ಇಂದು ಅಂತಿಮ ಪಂದ್ಯ ಆಡಲಿದೆ. ಶುಕ್ರವಾರ ಬೆಂಗಳೂರಿಗೆ ಆಗಮಿಸಿ ಉಳಿದ ಆಟಗಾರರೊಂದಿಗೆ ಅಭ್ಯಾಸದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಆಗಸ್ಟ್ 29ರ ವರೆಗೆ ಶಿಬಿರ ನಡೆಯಲಿದ್ದು ಇದು ಮುಕ್ತಾಯ ಕಂಡ ಬೆನ್ನಲ್ಲೇ ಆಟಗಾರರು ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಸಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಪ್ಟಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ಆಡಲಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ 4 ಪಂದ್ಯಗಳು ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿದೆ.

ರಾಹುಲ್‌ಗೆ ಗಾಯ ಚಿಂತೆ

ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ಈಗಷ್ಟೇ ಸಂಪೂರ್ಣ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್​ ರಾಹುಲ್‌ ಅವರು ಏಷ್ಯಾಕಪ್​ ತಂಡದಲ್ಲಿ ಅವಕಾಶ ಪಡೆದಿದ್ದರೂ ಅವರು ಆರಂಭಿಕ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್​ ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್‌ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಸಂಪೂರ್ಣ ಚೇತರಿಕೆ ಕಾಣದ ರಾಹುಲ್​ ಒಂದೊಮ್ಮೆ ಆಡಿದರೂ ಮತ್ತೆ ಗಾಯಕ್ಕೆ ತುತ್ತಾಗಬಾರದು ಎಂಬ ಬಯದಲ್ಲೇ ಬ್ಯಾಟ್​ ಬೀಸುವ ಸ್ಥಿತಿ ಎದುರಾಗಿದೆ. ಒಟ್ಟಾರೆ ಅವರು ಪ್ರೀ ಮೈಂಡ್​ ಗೇಮ್​ನಿಂದ ದೂರ ಉಳಿಯುವುದಂತು ನಿಜ.

ಇದನ್ನೂ ಓದಿ Asia Cup 2023: ಏಷ್ಯಾಕಪ್​ಗೆ ಚಹಲ್ ಕಡೆಗಣನೆ; ಸ್ಪಷ್ಟನೆ ನೀಡಿದ ನಾಯಕ ರೋಹಿತ್​ ಶರ್ಮ​

ಆರಂಭಿಕ ಸ್ಥಾನದ ಆಟಗಾರ ಆಯ್ಕೆಗೆ ಯಾವುದೇ ಗೊಂದಲವಿಲ್ಲ. ಈಗಾಗಲೇ ಯಶಸ್ಸು ಕಂಡಿರುವ ನಾಯಕ ರೋಹಿತ್​ ಮತ್ತು ಯುವ ಆಟಗಾರ ಶುಭಮನ್​ ಗಿಲ್​ ಇನಿಂಗ್ಸ್​ ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್​ ಕೊಹ್ಲಿ ಆಡಲಿದ್ದಾರೆ. ಆದರೆ ನಾಲ್ಕನೇ ಕ್ರಮಾಂಕಕ್ಕೆ ಯಾರನ್ನು ಆಡಿಸುವುದು ಎಂದು ಸಣ್ಣ ಗೊಂದಲ ಉಂಟಾಗಿದೆ. ರಾಹುಲ್​ ಫಿಟ್​ ಆಗಿಲ್ಲ, ಅಯ್ಯರ್ ಅಥವಾ ಸೂರ್ಯಕುಮಾರ್​ ​ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಗುವುದು ಖಚಿತ.

ಏಷ್ಯಾಕಪ್​ಗೆ ಭಾರತ ತಂಡ

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಇಶಾನ್‌ ಕಿಶನ್‌, ಶಾರ್ದೂಲ್‌ ಠಾಕೂರ್‌, ಅಕ್ಷರ್​ ಪಟೇಲ್‌, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ಪ್ರಸಿದ್ಧ್‌ ಕೃಷ್ಣ, ಸಂಜು ಸ್ಯಾಮ್ಸನ್‌ (ಮೀಸಲು ಆಟಗಾರ).  ​

Exit mobile version