ಬೆಂಗಳೂರು: ಬಹುನಿರೀಕ್ಷಿತ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯುವ ಏಷ್ಯಾಕಪ್(Asia Cup 2023) ಕ್ರಿಕೆಟ್ ಟೂರ್ನಿ ನಾಳೆಯಿಂದ(ಆಗಸ್ಟ್ 30) ಆರಂಭಗೊಳ್ಳಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಅಲಭ್ಯರಾಗಿದ್ದಾರೆ. ಹೀಗಾಗಿ ಈ ಪಂದ್ಯಕ್ಕೆ ಆಡುವ ಬಳಗ ಹೀಗಿರುವ ಸಾಧ್ಯತೆ ಇದೆ.
ರಾಹುಲ್ ಸ್ಥಾನಕ್ಕೆ ಇಶಾನ್ ಕಿಶನ್
ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಪಂದ್ಯಗಳಿಗೆ ಕೆ.ಎಲ್ ರಾಹುಲ್ ಲಭ್ಯವಿರುವುದಿಲ್ಲ ಎಂದು ಮಂಗಳವಾರ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul dravid) ಅವರು ಸುದ್ದಿಗೋಷ್ಟಿ ನಡೆಸಿ ಖಚಿತಪಡಿಸಿದರು. ಹೀಗಾಗಿ ಅವರ ಸ್ಥಾನಕ್ಕೆ ಇಶಾನ್ ಕಿಶನ್ ಅವರನ್ನು ಆಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ ಕೀಪರ್ ಆಗಿ ಅವರೊಬ್ಬರೆ ಕಾಣಿಸಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ತಂಡದದಲ್ಲಿದ್ದರೂ ಅವರು ಮೀಸಲು ಆಟಗಾರನ ಸ್ಥಾನದಲ್ಲಿದ್ದಾರೆ. ಹೀಗಾಗಿ ಪ್ರಧಾನ ತಂಡದಲ್ಲಿರುವ ಇಶಾನ್ ಅವರು ಕೈಗೆ ಗ್ಲೌಸ್ ತೊಟ್ಟು ವಿಕೆಟ್ ಹಿಂದೆ ನಿಲ್ಲಲಿದ್ದಾರೆ.
ಗಿಲ್-ರೋಹಿತ್ ಇನಿಂಗ್ಸ್ ಆರಂಭ
ಆರಂಭಿಕರಾಗಿ ಈಗಾಗಲೇ ಯಶಸ್ಸು ಕಂಡಿರುವ ನಾಯಕ ರೋಹಿತ್ ಮತ್ತು ಯುವ ಆಟಗಾರ ಶುಭಮನ್ ಗಿಲ್ ಭಾರತದ ಇನಿಂಗ್ಸ್ ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬೆನ್ನು ನೋವಿನಿಂದ ಚೇತರಿಕೆ ಕಂಡಿರುವ ಶ್ರೇಯಸ್ ಅಯ್ಯರ್ ಆಡುವುದು ಖಚಿತವಾಗಿದೆ. 5ನೇ ಕ್ರಮಾಂಕ ಉಪನಾಯಕ ಹಾರ್ದಿಕ್ ಪಾಂಡ್ಯ ಪಾಲಾದರೆ, 6ನೇ ಕ್ರಮಾಂಕ ಇಶಾನ್ ಕಿಶನ್ ಮತ್ತು 7ನೇ ಕ್ರಮಾಂಕ ಆಲ್ರೌಂಡರ್ ರವೀಂದ್ರ ಜಡೇಜಾಗೆ ಸಿಗಲಿದೆ. ಇನ್ನುಳಿದ ಸ್ಥಾನಗಳು ಬೌಲರ್ಗಳ ಪಾಲಾಗುದರಿಂದ ಸೂರ್ಯಕುಮಾರ್ಗೆ ಅವಕಾಶ ಸಿಗುವುದು ಕಷ್ಟ. ಅವರು ಬೆಂಚ್ ಕಾಯುವುದರಲ್ಲಿ ಅನುಮಾವಿಲ್ಲ. ಇವರ ಜತೆ ತಿಲಕ್ ವರ್ಮಾಗೂ ಇದೇ ಸ್ಥಿತಿ ಎದುರಾಗಲಿದೆ.
ಇದನ್ನೂ ಓದಿ Asia Cup 2023: ಪಾಕಿಸ್ತಾನದಲ್ಲೂ ಪಂದ್ಯ ಆಡಲಿದೆ ಟೀಮ್ ಇಂಡಿಯಾ!
ಮೂರು ವೇಗಿಗಳಿಗೆ ಅವಕಾಶ
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆಗಿ ಜಡೇಜಾ ಮತ್ತು ಕುಲ್ದೀಪ್ ಆಡಿದರೆ, ವೇಗಗ ಬೌಲಿಂಗ್ ಕೋಟದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಆಡಲಿದ್ದಾರೆ. ಹೀಗಾಗಿ ಈ ವಿಭಾಗದಲ್ಲಿ ಸಮಸ್ಯೆ ಕಾಣುತ್ತಿಲ್ಲ. ಅಕ್ಷರ್ ಪಟೇಲ್ ತಂಡದಲ್ಲಿದ್ದರೂ ಆಲ್ರೌಂಡರ್ ಕೋಟ ಜಡೇಜಾ ಮತ್ತು ಪಾಂಡ್ಯ ಪಾಲಾಗಿದೆ. ಅವರು ಹೊರಗುಳಿಯಲಿದ್ದಾರೆ.
ಭಾರತ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್(ವಿಕೆಟ್ ಕೀಪರ್).
ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.