ಬೆಂಗಳೂರು: ಏಷ್ಯಾಕಪ್ ಕ್ರಿಕೆಟ್(Asia Cup 2023) ಟೂರ್ನಿ ಆರಂಭಕ್ಕೆ ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಏಷ್ಯಾಕಪ್ ಇತಿಹಾಸದಲ್ಲಿ(asia cup history) ಅತ್ಯಂತ ಯಶಸ್ವಿ ತಂಡವೆಂಬುದು ಭಾರತದ ಹೆಗ್ಗಳಿಕೆ. 10 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 7 ಸಲ ಪ್ರಶಸ್ತಿಯನ್ನೆತ್ತಿದೆ. ಯುಎಇಯಲ್ಲಿ ಏರ್ಪಟ್ಟ 1984ರ ಚೊಚ್ಚಲ ಏಷ್ಯಾ ಕಪ್ ಗೆದ್ದ ಹಿರಿಮೆ ಭಾರತದದ್ದು. ಏಷ್ಯಾ ಕಪ್ ಎತ್ತಿದ ಮೊದಲ ನಾಯಕ ಸುನೀಲ್ ಗಾವಸ್ಕರ್. ಇದುವರೆಗಿನ ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಟಾಪ್ 5 ಆಟಗಾರರ ಇಣುಕು ನೋಟ ಇಲ್ಲಿದೆ.
ಸಚಿನ್ ತೆಂಡೂಲ್ಕರ್
ಟೀಮ್ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(sachin tendulkar) ಅವರು ಭಾರತ ಪರ ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 1990ರಲ್ಲಿ ಏಷ್ಯಾಕಪ್ ಆಡಿದ ಸಚಿನ್ ತೆಂಡೂಲ್ಕರ್, 51.10 ಸರಾಸರಿಯಲ್ಲಿ 2 ಶತಕ ಹಾಗೂ 7 ಅರ್ಧಶತಕ ನೆರವಿನಿಂದ 971 ರನ್ ಸಿಡಿಸಿದ್ದಾರೆ. ಭಾರತ ಪರ ಈ ಸಾಧನೆ ಮಾಡಿದ ಮೊದಲ ಮತ್ತು ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ಅವರು 2012ರಲ್ಲಿ ಕೊನೆಯ ಬಾರಿ ಏಷ್ಯಾಕಪ್ ಆಡಿದ್ದರು. ಈ ಆವೃತ್ತಿಯಲ್ಲಿ ಸಚಿನ್(52 ರನ್) ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದ್ದರು.
ರೋಹಿತ್ ಶರ್ಮ
ಪ್ರಸ್ತುತ ಟೀಮ್ ಇಂಡಿಯಾದ ನಾಯಕ, ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(rohit sharma) ಅವರು ಸಚಿನ್ ಬಳಿಕ ಏಷ್ಯಾಕಪ್ನಲ್ಲಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೋಹಿತ್ ಇದುವರೆಗೆ 22 ಪಂದ್ಯಗಳಿಂದ 46.56 ಸರಾಸರಿಯಲ್ಲಿ 745 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.
ಮಹೇಂದ್ರ ಸಿಂಗ್ ಧೋನಿ
ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ(ms dhoni) ಅವರು ತಮ್ಮ ನಾಯಕತ್ವದಲ್ಲಿ 2 ಏಷ್ಯಾಕಪ್ ಗೆದ್ದಿದ್ದಾರೆ. 2010ರಲ್ಲಿ ಏಕದಿನ ಮಾದರಿಯಲ್ಲಿ ಗೆದ್ದರೆ 2016ನೇ ಸಾಲಿನನಲ್ಲಿ ಟಿ20 ಮಾದರಿಯಲ್ಲಿ ಟ್ರೋಫಿ ಗೆದ್ದಿದ್ದರು. ಈ ಟೂರ್ನಿಯಲ್ಲಿ ಧೋನಿ 19 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ 3 ಅರ್ಧಶತಕ ನೆರವಿನಿಂದ 648 ರನ್ ಗಳಿಸಿ ಅತ್ಯಧಿಕ ರನ್ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ Asia Cup 2023 : ಟೀಮ್ ಇಂಡಿಯಾದ ಭಯ; ಏಕಾಏಕಿ ತಂಡವನ್ನು ಬದಲಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ
ವಿರಾಟ್ ಕೊಹ್ಲಿ
ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(virat kohli) ಅವರು ಏಷ್ಯಾಕಪ್ ಟೂರ್ನಿಯಲ್ಲಿ ಕೇವಲ 11 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 613 ರನ್ ಬಾರಿಸಿದ್ದಾರೆ. 2012ರ ಏಷ್ಯಾಕಪ್ ಟೂರ್ನಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ 183 ರನ್ ಬಾರಿಸಿ ಪಾಕ್ಗೆ ವಿರಾಟ ದರ್ಶನ ತೋರಿಸಿದ್ದರು. 2014ರಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರೂ ಫೈನಲ್ ತಲುಪಿಸುವಲ್ಲಿ ವಿಫಲರಾಗಿದ್ದರು.
ಗೌತಮ್ ಗಂಭೀರ್
ಟೀಮ್ ಇಂಡಿಯಾದ ಮಾಜಿ ಎಡಗೈ ಆರಂಭಿಕ ಆಟಗಾರ, ಬಿಜೆಪಿ ಸಂಸದರಾಗಿರುವ ಗೌತಮ್ ಗಂಭೀರ್(Gautam Gambhir) ಅವರು ಏಷ್ಯಾಕಪ್ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಗಂಭೀರ್ 44.07 ಸರಾಸರಿಯಲ್ಲಿ 1 ಶತಕ ಹಾಗೂ 5 ಅರ್ಧಶತಕ ನೆರವಿನಿಂದ 573 ರನ್ ಗಳಿಸಿದ್ದಾರೆ. 2010ರಲ್ಲಿ ಭಾರತ ಟ್ರೋಫಿ ಗೆಲ್ಲುವಲ್ಲಿ ಗಂಭೀರ್ ಮಹತ್ವದ ಪಾತ್ರವಹಿಸಿದ್ದರು.