ಕರಾಚಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಅವರು ಗುರುವಾರ ಪ್ರಕಟಿಸಿರುವ ಎರಡು ವರ್ಷದ ಕ್ರಿಕೆಟ್(Asia Cup) ವೇಳಾಪಟ್ಟಿ ಏಕ ಪಕ್ಷೀಯವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನೂತನ ಮುಖ್ಯಸ್ಥ ನಜೀಮ್ ಸೇಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವರ್ಷ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಕೂಟವು ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗುರುವಾರ ಪ್ರಕಟಿಸಿತ್ತು. ಜಯ್ ಶಾ ಅವರು 2023 ಮತ್ತು 2024ರಲ್ಲಿ ಆಯೋಜಿಸಲಾಗಿರುವ ಕ್ರಿಕೆಟ್ ಟೂರ್ನಿಗಳ ಕ್ಯಾಲೆಂಡರ್ ಪ್ರಕಟಿಸಿದ್ದರು. ಆದರೆ ಈ ವಿಚಾರವಾಗಿ ಇದೀಗ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸೇಥಿ ವಿರೋಧ ವ್ಯಕ್ತಪಡಿಸಿದ್ದಾರೆ.
“ಜಯ್ ಶಾ ಅವರೇ ತಾವು ಏಕಪಕ್ಷೀಯವಾಗಿ ಎಸಿಸಿ ರೂಪುರೇಷೆ ಮತ್ತು ಕ್ಯಾಲೆಂಡರ್ ಪ್ರಕಟಿಸಿರುವುದಕ್ಕೆ ಧನ್ಯವಾದಗಳು. 2023ರ ಏಷ್ಯಾ ಕಪ್ ಟೂರ್ನಿಯ ಆತಿಥ್ಯವನ್ನು ಪಾಕ್ ವಹಿಸಲಿದೆ. ಆದರೆ ನೀವು ನಮ್ಮ ಪಿಎಸ್‌ಎಲ್(ಪಾಕಿಸ್ತಾನ ಟಿ20 ಕ್ರಿಕೆಟ್ ಲೀಗ್) ಟೂರ್ನಿಯ ವೇಳಾಪಟ್ಟಿಯ ಬಗ್ಗೆಯೂ ನಿರ್ಧಾರ ಕೈಗೊಂಡಂತಿದೆ. ಇದಕ್ಕೆ ಶೀಘ್ರವೇ ಪ್ರತಿಕ್ರಿಯೆ ನೀಡುತ್ತೀರಿ ಎಂಬ ನಂಬಿಕೆ ಇದೆ” ಎಂದು ಸೇಥಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
“ಏಷ್ಯಾದ ಎಲ್ಲ ಕ್ರಿಕೆಟ್ ಮಂಡಳಿಯ ಜತೆ ಚರ್ಚಿಸದೆ ಈ ರೀತಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡದ್ದು ಸರಿಯಲ್ಲ. ಇದು ತಮ್ಮ ಲಾಭಕ್ಕಾಗಿ ರಚಿಸಿದ ವೇಳಾಪಟ್ಟಿಯಂತಿದೆ ಎಂದು ಸೇಥಿ ಜೈಯ್ ಶಾ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಸೇಥಿಯ ಈ ಹೇಳಿಕೆಗೆ ಜಯ್ ಶಾ ಯಾವುದೇ ರೀತಿಯ ಪ್ರತ್ಯುತ್ತರ ನೀಡಿಲ್ಲ.
ಇದನ್ನೂ ಓದಿ | Asia Cup | ಏಷ್ಯಾಕಪ್; ಒಂದೇ ಗ್ರೂಪ್ನಲ್ಲಿ ಕಾಣಿಸಿಕೊಂಡ ಬದ್ಧ ವೈರಿಗಳಾದ ಭಾರತ-ಪಾಕಿಸ್ತಾನ!