ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಜಯ್ ಶಾ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜೀಮ್ ಸೇಥಿ ಮಾಡಿರುವ ಆರೋಪಗಳನ್ನು ಎಸಿಸಿ ತಳ್ಳಿಹಾಕಿದೆ.(Asia Cup) ಇದು ಏಕಪಕ್ಷೀಯ ನಿರ್ಧಾರವಲ್ಲ. ಎಲ್ಲರ ಸಮ್ಮತಿಯಿಂದಲೇ ಈ ವೇಳಾಪಟ್ಟಿಯನ್ನು ರಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಜಯ್ ಶಾ ಅವರು ಪ್ರಕಟಿಸಿರುವ ಎಸಿಸಿಯ ಎರಡು ವರ್ಷದ ಕ್ರಿಕೆಟ್ ವೇಳಾಪಟ್ಟಿಯ ಕ್ಯಾಲೆಂಡರ್ ಏಕಪಕ್ಷೀಯವಾಗಿದ್ದು ಇದು ಭಾರತದ ಲಾಭಕ್ಕೋಸ್ಕರ ರಚಿಸಿದಂತಿದೆ ಎಂದು ಸೇಥಿ ಟ್ವೀಟ್ ಮೂಲಕ ಆರೋಪಿಸಿದ್ದರು.
ಈ ಆರೋಪವನ್ನು ಶುಕ್ರವಾರ ಎಸಿಸಿ ಅಲ್ಲಗಳೆದಿದೆ. “ಪಿಸಿಬಿ ಸೇರಿದಂತೆ ಎಸಿಸಿಯ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಎರಡು ವರ್ಷಗಳ ವೇಳಾಪಟ್ಟಿಯನ್ನು ಡಿಸೆಂಬರ್ 22 ರಂದೇ ಕಳುಹಿಸಲಾಗಿತ್ತು. ಪಿಸಿಬಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ” ಎಂದು ಎಸಿಸಿ ಸ್ಪಷ್ಟಪಡಿಸಿದೆ. “ನಜೀಮ್ ಸೇಥಿ ಎಸಿಸಿ ಅಧ್ಯಕ್ಷ ಜಯ್ ಶಾ ವಿರುದ್ಧ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕ್ರಿಕೆಟ್ ವೇಳಾಪಟ್ಟಿ ಸಿದ್ಧಪಡಿಸುವ ವೇಳೆ ಎಸಿಸಿಯು ಸರಿಯಾದ ಪ್ರಕ್ರಿಯೆ ಅನುಸರಿಸಿದೆ” ಎಂದಿದೆ.
ಜಯ್ ಶಾ ಅವರು 2023 ಮತ್ತು 2024ರಲ್ಲಿ ಆಯೋಜಿಸಲಾಗಿರುವ ಕ್ರಿಕೆಟ್ ಟೂರ್ನಿಗಳ ಕ್ಯಾಲೆಂಡರ್ ಗುರುವಾರ ಪ್ರಕಟಿಸಿದ್ದರು. ವಾಸ್ತವವಾಗಿ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಆದರೆ ವೇಳಾಪಟ್ಟಿಯಲ್ಲಿ ಆತಿಥೇಯ ರಾಷ್ಟ್ರ ಯಾವುದು ಎಂಬುದನ್ನು ಉಲ್ಲೇಖಿಸಿರಲಿಲ್ಲ. ಇದು ಪಿಸಿಬಿಯನ್ನು ಕೆರಳುವಂತೆ ಮಾಡಿದೆ. ಈ ಕೋಪದಲ್ಲಿ ನಜೀಮ್ ಸೇಥಿ ಅವರು ಜಯ್ ಶಾ ವಿರುದ್ಧ ನೇರ ಆರೋಪ ಮಾಡಿದ್ದರು.
ಇದನ್ನೂ ಓದಿ | Asia Cup | ಎಸಿಸಿ ಕ್ಯಾಲೆಂಡರ್ ಏಕಪಕ್ಷೀಯ ನಿರ್ಧಾರ ; ಪಿಸಿಬಿ ಮುಖ್ಯಸ್ಥ ನಜೀಮ್ ಸೇಥಿ ಅಸಮಾಧಾನ