Site icon Vistara News

Asia Cup | ಏಷ್ಯಾಕಪ್​; ಒಂದೇ ಗ್ರೂಪ್​ನಲ್ಲಿ ಕಾಣಿಸಿಕೊಂಡ ಬದ್ಧ ವೈರಿಗಳಾದ ಭಾರತ-ಪಾಕಿಸ್ತಾನ!

Asia Cup in Pakistan; India vs Pakistan match at a neutral venue

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನೋಡುವುದೇ ಒಂದು ರೋಮಾಂಚನ. ಈ ಪಂದ್ಯ ನೋಡಲು ಕ್ರಿಕೆಟ್​ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುತ್ತಾರೆ. ಇದೀಗ ಉಭಯ ತಂಡಗಳು ಮುಖಾಮುಖಿಯಾಗುವ ಕಾಲ ಕೂಡಿಬಂದಿದೆ. 2023ರ ಏಷ್ಯಾಕಪ್​ನಲ್ಲಿ(Asia Cup) ಇತ್ತಂಡಗಳು ಒಂದೇ ಗ್ರೂಪ್​ನಲ್ಲಿ ಕಾಣಿಸಿಕೊಂಡಿದೆ.

2023-24 ಕ್ಯಾಲೆಂಡರ್​ ವರ್ಷದಲ್ಲಿ ಏಷ್ಯಾದಲ್ಲಿ ನಡೆಯುವ ಕ್ರಿಕೆಟ್​ ಸರಣಿಯ ವೇಳಾಪಟ್ಟಿ ಗುರುವಾರ ಪ್ರಕಟಗೊಂಡಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್​ ಶಾ ಟ್ವೀಟ್ ಮಾಡುವ ಮೂಲಕ ಈ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಬಹು ನಿರೀಕ್ಷಿತ ಏಷ್ಯಾಕಪ್ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಈ ಬಾರಿಯ ಏಷ್ಯಾಕಪ್​​ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಗ್ರೂಪ್-1 ರಲ್ಲಿ ಭಾರತ-ಪಾಕಿಸ್ತಾನ

ಸಾಂಪ್ರದಾಯಿಕ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ 1ರಲ್ಲಿ ಸ್ಥಾನ ಪಡೆದಿದೆ. ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಅಫಘಾನಿಸ್ತಾ ಮತ್ತು ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡ ಭಾರತ-ಪಾಕ್​ ಜತೆಗೆ ಗ್ರೂಪ್​ ಒಂದರಲ್ಲಿ ಸ್ಥಾನ ಪಡೆಯಲ್ಲಿದೆ. ಲೀಗ್ ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಬಳಿಕ ಸೂಪರ್-4 ಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ. ಫೈನಲ್​ ಸೇರಿ ಒಟ್ಟು 13 ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್‌ನಲ್ಲಿ ಈ ಕೂಟ ನಡೆಯಲಿದೆ.

ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಮೊದಲನೆಯದಾಗಿ ಉಭಯ ತಂಡಗಳ ನಡುವಿನ ಪೈಪೋಟಿ ಲೀಗ್ ಸುತ್ತಿನಲ್ಲಿ ನಡೆಯಲಿದೆ. ಇದಾದ ಬಳಿಕ ಸೂಪರ್-4 ಸುತ್ತಿನಲ್ಲೂ ಉಭಯ ತಂಡಗಳು ಸೆಣಸಬಹುದು. ಬಳಿಕ ಅಂಕಪಟ್ಟಿಯಲ್ಲಿ ಪಟ್ಟಿಯಲ್ಲಿ ಉಭಯ ತಂಡಗಳು ಅಗ್ರ ಎರಡು ಸ್ಥಾನ ಪಡೆದರೆ, ಎರಡೂ ತಂಡಗಳು ಫೈನಲ್​ನಲ್ಲೂ ಹೋರಾಟ ನಡೆಸಲಿವೆ.

ಎಲ್ಲಿ ನಡೆಯಲಿದೆ ಟೂರ್ನಿ!

2023ರ ಏಷ್ಯಾ ಕಪ್​ಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಅದರಂತೆ ಈ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಬೇಕು. ಆದರೆ ಇತ್ತೀಚೆಗೆ ಎಸಿಸಿ ಮುಖ್ಯಸ್ಥ ಜಯ್​ ಶಾ ಈ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಿದರೆ ಭಾರತ ತಂಡ ಆಡುವುದಿಲ್ಲ ಎಂದು ಹೇಳಿದ್ದರು. ಜತೆಗೆ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸುವಂತೆ ಹೇಳಿದ್ದರು. ಇದಕ್ಕೆ ಪಾಕ್​ ಕ್ರಿಕೆಟ್​ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ಈ ಟೂರ್ನಿಯನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ | Asia Cup 2023 | ಪಾಕ್‌ನಲ್ಲಿ ಟೂರ್ನಿ ನಡೆಸದೇ ಹೋದರೆ ಆತಿಥ್ಯ ಹಕ್ಕು ನಮಗೆ ಬೇಡ; ರಾಜಾ ಹೊಸ ವರಸೆ

Exit mobile version