ನವದೆಹಲಿ: ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಏಷ್ಯಾಕಪ್‌ಗೆ(Asia cup 2023) ಕೊನೆಗೂ ಭಾರತ ತಂಡ(Team India) ಪ್ರಕಟಗೊಂಡಿದೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್(Ajit Agarkar) ಮತ್ತು ನಾಯಕ ರೋಹಿತ್ ಶರ್ಮ(Rohit Sharma) ಉಪಸ್ಥಿತಿಯಲ್ಲಿ ಸೋಮವಾರ 17 ಸದಸ್ಯರ ಭಾರತ ತಂಡವನ್ನು(17-member squad) ಪ್ರಕಟಿಸಲಾಯಿತು. ತಂಡದಲ್ಲಿ ಕೆಲ ಅಚ್ಚರಿಯ ಆಯ್ಕೆಗಳು ನಡೆದಿದ್ದು ಹಿರಿಯ ಮತ್ತು ಅನಿಭವಿ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಅವರನ್ನು ಕೈಬಿಡಲಾಗಿದೆ. ಇದಕ್ಕೆ ರೋಹಿತ್ ಮತ್ತು ಅಗರ್ಕರ್ ಸ್ಪಷ್ಟನೇ ನೀಡಿದ್ದಾರೆ.
ವಿಶ್ವಕಪ್ ಬಾಗಿಲು ಮುಚ್ಚಿಲ್ಲ
ಯಜುವೇಂದ್ರ ಚಹಲ್ ಅವರನ್ನು ಕೈ ಬಿಟ್ಟ ವಿಚಾರದಲ್ಲಿ ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ತಂಡ ಪ್ರಕಟಗೊಳಿಸಿದ ತಕ್ಷಣ ನಾಯಕ ರೋಹಿತ್ ಶರ್ಮ, ಚಹಲ್ರನ್ನು ಕೈಬಿಟ್ಟ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. “ನಾವು ಕೇವಲ 17 ಆಟಗಾರರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ. ಹೀಗಾಗಿ ಚಹಲ್ ಆಯ್ಕೆ ಕಷ್ಟವಾಯಿತು. ಏಷ್ಯಾ ಕಪ್ಗೆ ಆಯ್ಕೆಯಾಗಿಲ್ಲ ಎಂದ ತಕ್ಷಣ ಅವರಿಗೆ ಭಾರತ ತಂಡದಲ್ಲಿ ಅವಕಾಶ ಇಲ್ಲ ಎಂದು ಅರ್ಥವಲ್ಲ ವಿಶ್ವಕಪ್ ಟೂರ್ನಿಯ ಬಾಗಿಲು ಇನ್ನೂ ಕೂಡ ತೆರೆದಿದೆ” ಎಂದು ಹೇಳಿದರು. ಜತೆಗೆ ಅನುಭವಿ ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಹಲವು ಆಟಗಾರರಿಗೆ ಇನ್ನೂ ಕೂಡ ವಿಶ್ವಕಪ್‌ಗೆ ಮರಳುವ ಅವಕಾಶವಿದೆ ಎಂದರು.
ತಂಡದ ಸಮತೋಲನ ಮುಖ್ಯ
ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಕೂಡ ಚಹಲ್ ಅವರನ್ನು ಕೈ ಬಿಟ್ಟ ವಿಚಾರವಾಗಿ ಮಾತನಾಡಿ, ನಮಗೆ ಒಬ್ಬ ಮಣಿಕಟ್ಟಿನ ಸ್ಪಿನ್ನರ್ (Wrist Spinner) ಆಯ್ಕೆಗೆ ಮಾತ್ರ ಅವಕಾಶವಿತ್ತು. ಹೀಗಾಗಿ ಎಡಗೈ ಸ್ಪಿನ್ನರ್ ಆಗಿರುವ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದೆವು. ಕಳೆದ ವಿಂಡೀಸ್ ಸರಣಿಯಲ್ಲಿಯೂ ಕುಲ್ದೀಪ್ ಶ್ರೇಷ್ಠ ಪ್ರದರ್ಶನ ತೋರಿದ್ದರು. ಚಹಲ್ ಅದ್ಭುತ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಲವಾರು ಪಂದ್ಯಗಳಲ್ಲಿ ಅವರು ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ನಾವು ತಂಡದ ಸಮತೋಲನವನ್ನು ಮಾಡಬೇಕಾದ ನಿಟ್ಟಿನಲ್ಲಿ ಇಬ್ಬರು ಮಣಿಕಟ್ಟಿನ ಸ್ಪಿನ್ನರ್‌ಗಳನ್ನು ಆಯ್ಕೆ ಮಾಡುವುದು ಕಷ್ಟಕರವಾಗಿತ್ತು. ಹೀಗಾಗಿ ಚಹಲ್ರನ್ನು ಕೈಬಿಡಲಾಯಿತು ಎಂದು ಹೇಳಿದರು.
2 ಪಂದ್ಯ ಆಡಿದ ಚಹಲ್
ಯಜುವೇಂದ್ರ ಚಹಲ್ ಅವರು ಈ ವರ್ಷ ಭಾರತ ಪರ ಕೇವಲ ಎರಡು ಏಕದಿನ ಪಂದ್ಯ ಮಾತ್ರ ಆಡಿದ್ದಾರೆ. ಮೊನ್ನೆ ತಾನೆ ಮುಕ್ತಾಯ ಕಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ತಂಡದ ಭಾಗವಾಗಿದ್ದರೂ ಅವರಿಗೆ ಆಡುವ ಅವಕಾಶ ಲಭಿಸಿರಲಿಲ್ಲ. ಕೇವಲ ಟ20 ಪಂದ್ಯ ಮಾತ್ರ ಆಡಿದ್ದರು. ಅವರು ಭಾರತ ಪರ ಕೊನೆಯ ಏಕದಿನ ಪಂದ್ಯ ಆಡಿದ್ದು ವರ್ಷಾರಂಭದಲ್ಲಿ ನಡೆದ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ. ಇದಾದ ಬಳಿಕ ತಂಡದಿಂದ ದೂರವೇ ಉಳಿದಿದ್ದಾರೆ.
ಇದನ್ನೂ ಓದಿ Asia Cup 2023: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಒಲಿದ ಅದೃಷ್ಟ, ಇಲ್ಲಿದೆ ಪಟ್ಟಿ
ಏಷ್ಯಾಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).