ಕರಾಚಿ: ಬಹುನಿರೀಕ್ಷಿತ ಏಷ್ಯಾ ಕಪ್ ಕ್ರಿಕೆಟ್(Asia Cup) ಟೂರ್ನಿ ಇದೇ ಆಗಸ್ಟ್ 30ರಿಂದ ಆರಂಭಗೊಳ್ಳಲಿದೆ. ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಈ ಟೂರ್ನಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಸಾಂಪ್ರದಾಯಿಕ ಬದ್ದ ಎದುರಾಳಿ ಭಾರತ ಮತ್ತು ಪಾಕಿಸ್ತಾನ(india vs pakistan) ವಿರುದ್ಧದ ಹೈವೋಲ್ಟೇಜ್ ಕದನ ಸೆಪ್ಟಂಬರ್ 2ರಂದು ನಡೆಯಲಿದೆ. ಇದೀಗ ಈ ಪಂದ್ಯದ ಟಿಕೆಟ್ ಮಾರಾಟ(Asia Cup Tickets) ಆರಂಭಗೊಂಡಿದೆ.
ಟಿಕೆಟ್ ಮಾರಾಟದ ಕುರಿತು ಅಧಿಕೃತ ಮಾಹಿತಿ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(Pakistan Cricket Board) ಇಂದಿನಿಂದ (ಗುರುವಾರ) ಮಾರಾಟವಾಗಲಿದೆ ಎಂದು ತಿಳಿಸಿದೆ. “ಎಸಿಸಿ(ACC) ಪುರುಷರ ಏಷ್ಯಾ ಕಪ್ 2023ರ ಆತಿಥೇಯರಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ಟೂನಿಯ ಪಂದ್ಯಗಳ ಟಿಕೆಟ್ ಮಾರಾಟದ ದಿನಾಂಕ ಘೋಷಿಸಲು ಸಂತಸವಾಗುತ್ತಿದೆ” ಎಂದು ಹೇಳಿದೆ. ಮೊದಲ ಹಂತದ ಟಿಕೆಟ್‌ಗಳು ಮಧ್ಯಾಹ್ನ 12 ರಿಂದ ಮಾರಾಟವಾಗಲಿದೆ.
ಟಿಕೆಟ್ ಎಲ್ಲಿ ಲಭ್ಯ
ಟೂನಿಯ ಎಲ್ಲ ಪಂದ್ಯಗಳ ಟಿಕೆಟ್ pcb.bookme.pk ನಲ್ಲಿ ಲಭ್ಯವಿರುತ್ತವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಶ್ರೀಲಂಕಾದಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳು ಸಂಜೆ 6 ಗಂಟೆಯಿಂದ ಆರಂಭವಾಗಲಿದೆ ಎಂದು ಪಿಸಿಬಿ ತಿಳಿಸಿದೆ. ಆದರೆ ಟಿಕೆಟ್ಗಳ ಖರೀದಿಗೆ ಕೆಲ ನಿಯಮಗಳೂ ಕೂಡ ಅನ್ವಯವಾಗಲಿದೆ. ನಿಯಮಗಳ ಪ್ರಕಾರ ಪ್ರತಿ ಐಡಿಗೆ ನಾಲ್ಕು ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಒಂದು ಐಡಿಗೆ ಎರಡು ಟಿಕೆಟ್‌ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.
ಭಾರತ, ನೇಪಾಳ ಮತ್ತು ಪಾಕಿಸ್ತಾನ ʼಎʼ ಗುಂಪಿನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ʼಬಿʼ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಒಟ್ಟು 13 ಪಂದ್ಯಗಳು ನಡೆಯಲಿದ್ದು ಇದರಲ್ಲಿ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಫೈನಲ್ ಸೇರಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. 50 ಓವರ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.
ಭಾರತಕ್ಕೆ ಅಗ್ನಿ ಪರೀಕ್ಷೆ
ಏಷ್ಯಾಕಪ್ನಲ್ಲಿ 7 ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡಕ್ಕೆ 2023ರ ನಿರ್ಣಾಯಕ ವಿಶ್ವಕಪ್ಗೆ ಮುಂಚಿತವಾಗಿ ನಡೆಯುವ ಅಗ್ನಿಪರೀಕ್ಷೆ ಇದಾಗಿದೆ. ಇಲ್ಲಿ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದ ಮೇಲೆ ವಿಶ್ವಕಪ್ ಭವಿಷ್ಯ ನಿರ್ಧರವಾಗಲಿದೆ. ರೋಹಿತ್ ಶರ್ಮಾ(Rohit Sharma) ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿರಿಮೆಯೂ ಭಾರತ ತಂಡದ್ದಾಗಿದೆ. ಈ ಬಾರಿಯೂ ಗೆದ್ದರೆ ವಿಶ್ವ ಕಪ್ನಲ್ಲಿ ಭಾರತ ತಂಡದ ಮೇಲೆ ನಿರಿಕ್ಷೆಯೊಂದನ್ನು ಮಾಡಬಹುದಾಗಿದೆ.
ಇದನ್ನೂ ಓದಿ Asia Cup: ಕೋಚ್ ದ್ರಾವಿಡ್ ಜತೆ ಜಯ್ ಶಾ ಸಭೆ; ಆಗಸ್ಟ್ 20ಕ್ಕೆ ಏಷ್ಯಾಕಪ್ ತಂಡ ಪ್ರಕಟ
ಪಾಕ್ನಲ್ಲಿಯೂ ಆಡಲಿದೆ ಭಾರತ
ಭದ್ರತೆಯ ಕಾರಣದಿಂದ ಪಾಕ್‌ಗೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಕೊನೆಗೂ ಯಶಸ್ಸು ಕಂಡ ಭಾರತ ತಂಡ ಈ ಫಲಿತಾಂಶ ದಾಖಲಾದರೆ ಅನಿವಾಯವಾಗಿ ಪಾಕ್‌ನಲ್ಲಿ ಒಂದು ಪಂದ್ಯ ಆಡುವ ಸಂಕಟಕ್ಕೆ ಸಿಲುಕಲಿದೆ. ಹೌದು ಭಾರತ ಪಾಲಿನ ಲೀಗ್ ಪಂದ್ಯಗಳೆಲ್ಲಾ ಲಂಕಾದಲ್ಲಿ ನಡೆದರೂ ಸೂಪರ್-4ನ ಒಂದು ಪಂದ್ಯ ಲಹೋರ್ನಲ್ಲಿ ನಡೆಯಲಿದೆ. ಇದು ಭಾರತಕ್ಕೆ ಚಿಂತೆಗೀಡು ಮಾಡಿದೆ. ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ಲೀಗ್ನಲ್ಲಿ ನಡೆಯುವ ಎಲ್ಲ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದರೆ, ಆಗ ಸೂಪರ್ ಫೋರ್ ಹಂತದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಭಾರತ ಎದುರಿಸಬೇಕು. ಈ ಪಂದ್ಯ ಪಾಕ್ನ ಲಾಹೋರ್ನಲ್ಲಿ ನಡೆಯಲಿದೆ. ಸೆಪ್ಟೆಂಬರ್ 6ಕ್ಕೆ ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಭಾರತ ಲೀಗ್ನಲ್ಲಿ ಮೊದಲ ಸ್ಥಾನ ಪಡೆದರೆ ಪಾಕ್‌ನಲ್ಲಿ ಪಂದ್ಯ ಆಡಲಿದೆಯಾ ಎನ್ನುವುದು ಎಲ್ಲರ ಕುತೂಹಲವಾಗಿದೆ.
ಭಾರತದ ಸಾಧನೆ
1984 ಚಾಂಪಿಯನ್
1988 ಚಾಂಪಿಯನ್
1991 ಚಾಂಪಿಯನ್
1995 ಚಾಂಪಿಯನ್
2010 ಚಾಂಪಿಯನ್
2016 ಚಾಂಪಿಯನ್
2018 ಚಾಂಪಿಯನ್
1986 ಪಾಲ್ಗೊಂಡಿಲ್ಲ
1997 ರನ್ನರ್ಸ್ ಅಪ್
2000 3ನೇ ಸ್ಥಾನ
2004 ರನ್ನರ್ಸ್ ಅಪ್
2008 ರನ್ನರ್ಸ್ ಅಪ್
2012 3ನೇ ಸ್ಥಾನ
2014 3ನೇ ಸ್ಥಾನ